ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶಾಂತ ವಾತಾವರಣವನ್ನು ಇಂದು ಬೆಳಗಿನ ಜಾವ ನಿಗೂಢ ದರೋಡೆ ಯತ್ನ ಕದಡಿದೆ! ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ ಗುರಿಯಾಗಿದ್ದ ಈ ದಾಳಿ ರಹಸ್ಯಮಯ ರೀತಿಯಲ್ಲಿ ವಿಫಲವಾಗಿದೆ.

ಮಾಹಿತಿಯ ಪ್ರಕಾರ, ದುಷ್ಕರ್ಮಿಗಳು ಬ್ಯಾಂಕ್‌ನ ಸೇಫ್ ಲಾಕರ್ ಹಾಗೂ ಕ್ಯಾಶ್‌ ಕೌಂಟರ್ ಹತ್ತಿರದ ಕಿಟಕಿಯನ್ನು ಕೊರೆದು ಒಳನುಗ್ಗುವ ಪ್ರಯತ್ನ ನಡೆಸಿದ್ದರು. ಆದರೆ ಅಕಸ್ಮಾತ್‌ ಸೈರನ್‌ ಮೊಳಗಿದ ಶಬ್ದ ಕೇಳುತ್ತಿದ್ದಂತೆಯೇ ಕಳ್ಳರು ಗಾಬರಿಗೊಂಡು, ಪತ್ತೆ ಆಗುವ ಭಯದಿಂದ ಬ್ಯಾಂಕ್ ಒಳಗೇ ಬೆಂಕಿ ಹಚ್ಚಿ ಪರಾರಿಯಾದರೆಂಬ ಮಾಹಿತಿ ದೊರಕಿದೆ!

ಘಟನೆಯ ವಿಚಾರ ತಿಳಿದ ತಕ್ಷಣ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಯಲ್ಲಾಪುರ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಹಾನಾಪುರ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್‌ನ ಒಳಭಾಗದ ಸಿಸಿಟಿವಿ ದೃಶ್ಯಗಳು ಹಾಗೂ ಸುಟ್ಟುಹೋದ ಸಾಮಗ್ರಿಗಳ ಪರಿಶೀಲನೆ ನಡೆಯುತ್ತಿದೆ.

ಘಟನೆಯ ನಂತರ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, “ಕಳ್ಳರು ಸ್ಥಳೀಯರೇನಾ? ಅಥವಾ ಹೊರಜಿಲ್ಲೆಯ ಗ್ಯಾಂಗ್‌ನವರು?” ಎಂಬ ಕುತೂಹಲದ ಪ್ರಶ್ನೆಗಳು ಜನರ ಮಧ್ಯೆ ಕೇಳಿಬರುತ್ತಿವೆ.

ಪೊಲೀಸರು ಸುಳಿವುಗಳ ಆಧಾರದ ಮೇಲೆ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

 

 

Please Share: