ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಂಪತಿಯ ಪುತ್ರಿ ವೈಷ್ಣವಿ ಕಿಶೋರ್ ನಾಯ್ಕ ಅವರು ಶೈಕ್ಷಣಿಕ ಸಾಧನೆಯ ಮೂಲಕ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಬಿ.ಕಾಂ. ಪರೀಕ್ಷೆಯಲ್ಲಿ ಶೇ. 93.28 ಅಂಕ ಗಳಿಸಿ ವಿಶ್ವವಿದ್ಯಾಲಯಕ್ಕೆ 10ನೇ ರ್ಯಾಂಕ್ ಪಡೆದಿದ್ದಾರೆ.

ಕಾರವಾರದ ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ವೈಷ್ಣವಿ, ಶಾಲಾ ಹಂತದಿಂದಲೇ ಉತ್ತಮ ಅಂಕಗಳೊಂದಿಗೆ ಶೈಕ್ಷಣಿಕ ಪ್ರತಿಭೆ ಮೆರೆದಿದ್ದಾರೆ. 2020ರಲ್ಲಿ ಸದಾಶಿವಗಡದ ಸೇಕ್ರೆಡ್ ಹಾರ್ಟ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 93.92 ಅಂಕ ಗಳಿಸಿದ್ದರು. 2022ರಲ್ಲಿ ಕಾರವಾರದ ಕಾಜುಬಾಗ್ನ ಸೇಂಟ್ ಜೋಸೆಫ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿ ಶೇ. 96.5 ಅಂಕ ಪಡೆದಿದ್ದರು.
ಪದವಿ ಹಂತದಲ್ಲಿಯೂ ಉತ್ತಮ ಸಾಧನೆಯ ಓಟ ಮುಂದುವರಿಸಿದ ಅವರು, ಶೇ. 93.28 ಅಂಕಗಳೊಂದಿಗೆ ವಿಶ್ವವಿದ್ಯಾಲಯದ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ತಮ್ಮ ಪರಿಶ್ರಮಕ್ಕೆ ಪ್ರತಿಫಲ ಕಂಡುಕೊಂಡಿದ್ದಾರೆ.
ವೈಷ್ಣವಿ ಅವರ ತಂದೆ ಕಿಶೋರ್ ನಾಯ್ಕ ಹಾಗೂ ತಾಯಿ ಸಂಗೀತಾ ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯದ ಜವಾಬ್ದಾರಿಗಳ ನಡುವೆ ಮಗಳ ಶೈಕ್ಷಣಿಕ ಸಾಧನೆ ಕುಟುಂಬಕ್ಕೆ ಸಂತಸ ತಂದಿದೆ. ವೈಷ್ಣವಿ ಅವರ ಸಾಧನೆಗೆ ಕುಟುಂಬಸ್ಥರು, ಹಿತೈಷಿಗಳು ಹಾಗೂ ಕಾಲೇಜಿನ ವಲಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.


