ಕರಾವಳಿ ವಾಯ್ಸ್ ನ್ಯೂಸ್
ಸಿದ್ದಾಪುರ, ಏ.23: ಆನ್‌ಲೈನ್ ಸ್ಟಾಕ್ ಟ್ರೇಡಿಂಗ್‌ನಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪಟ್ಟಣದ ರಾಜಮಾರ್ಗ ಪ್ರದೇಶದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ರಾಜಮಾರ್ಗ ನಿವಾಸಿ, 22 ವರ್ಷದ ವಿದ್ಯಾರ್ಥಿ ಹರ್ಷವರ್ಧನ ಚಂದ್ರಶೇಖರ ಪಂಡಿತ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಹರ್ಷವರ್ಧನ ಇತ್ತೀಚೆಗೆ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್ ಟ್ರೇಡಿಂಗ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದನು. ಆದರೆ, ನಿರೀಕ್ಷಿತ ಲಾಭ ಸಿಗದೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ಇದರಿಂದ ಆತ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನು ಎನ್ನಲಾಗಿದೆ.
ಮೃತನ ತಂದೆ ಹಾಗೂ ವೈದ್ಯರಾದ ಚಂದ್ರಶೇಖರ ಚಂದ್ರಬಾಬು ಪಂಡಿತ ಅವರು ನೀಡಿದ ದೂರಿನಲ್ಲಿ, “ಮಗ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದನ್ನು ತುಂಬಾ ಮನಸ್ಸಿಗೆ ಹಾಕಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಆತ ಮಾನಸಿಕವಾಗಿ ಕುಗ್ಗಿದ್ದ” ಎಂದು ತಿಳಿಸಿದ್ದಾರೆ.
ಖಿನ್ನತೆಯಿಂದ ಬಳಲುತ್ತಿದ್ದ ಹರ್ಷವರ್ಧನ ಇತ್ತೀಚೆಗೆ ಮದ್ಯಪಾನದ ಚಟಕ್ಕೂ ಒಳಗಾಗಿದ್ದನು ಎನ್ನಲಾಗಿದ್ದು, ಈ ವಿಚಾರ ಕುಟುಂಬದಲ್ಲಿ ಆತಂಕ ಮೂಡಿಸಿತ್ತು.
ಬುಧವಾರ ಮುಂಜಾನೆ 2.30ರಿಂದ 11.30ರ ನಡುವೆ, ಮನೆಯಲ್ಲಿಯೇ ತನ್ನ ಕೋಣೆಯಲ್ಲಿ ಫ್ಯಾನ್‌ಗೆ ಟವಲ್‌ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಕೊಠಡಿಗೆ ಹೋದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
“ಟ್ರೇಡಿಂಗ್‌ನ ನಷ್ಟದಿಂದ ಉಂಟಾದ ಹತಾಶೆಯೇ ಮಗನ ಈ ಕ್ರಮಕ್ಕೆ ಕಾರಣ. ಸಾವಿನಲ್ಲಿ ಯಾವುದೇ ಅನುಮಾನವಿಲ್ಲ” ಎಂದು ತಂದೆ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
