ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಸಾಮಾಜಿಕ ಕಾರ್ಯಕರ್ತ ಸೂರಜ್ ಕುರುಮಕರ್ ಅವರ ತಾಯಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಧುಕರ್ ಕುರುಮಕರ್ ಅವರ ಪತ್ನಿ ಸುಮನ ಕುರುಮಕರ್ (70) ಅವರು ದೀಪಾವಳಿ ದಿನವಾದ ರವಿವಾರ ಹೃದಯಾಘಾತದಿಂದ ನಿಧನರಾದರು.

Banner Ad

ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಸುಮನ ಅವರು ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ದೇವಾಳಿವಾಡಾ ಪದ್ಮನಾಭನಗರದ ಸ್ವಗೃಹದಲ್ಲಿದ್ದರು. ಈ ವೇಳೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ವೈದ್ಯರ ಪ್ರಯತ್ನಗಳ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 7.30ಕ್ಕೆ ಕೊನೆಯುಸಿರೆಳೆದರು.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರ ಪತಿ ಮಧುಕರ್ ಕುರುಮಕರ್ ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ, ಕಾರವಾರ ಡಿಸಿಆರ್‌ಬಿ ಪಿಎಸ್ಐ ಆಗಿ ಐದು ವರ್ಷ ಹಾಗೂ ಕಾರವಾರ ರೈಲ್ವೆ ಪೊಲೀಸ್ ಠಾಣೆ, ಕುಮಟಾ ಮತ್ತು ಜೊಯಿಡಾ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಪೊಲೀಸ್ ಇಲಾಖೆಯಲ್ಲಿ ನಿಷ್ಠಾವಂತ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಅವರು 2019ರಲ್ಲಿ ನಿಧನರಾಗಿದ್ದರು.

ಮೃತರ ಅಂತ್ಯಕ್ರಿಯೆ ಕಾರವಾರದ ದಿವೇಕರ್ ಕಾಲೇಜು ಎದುರಿನ ರುದ್ರಭೂಮಿಯಲ್ಲಿ ನೆರವೇರಿತು. ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಕೊಂಕಣ ಖಾರ್ವಿ ಸಮಾಜದ ಮುಖಂಡರು ಹಾಗೂ ಸ್ಥಳೀಯ ಮುಖಂಡರು ಮನೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.

 

 

 

 

Please Share: