ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಮಕ್ಕಳ ಕೈಗೆ ವಾಹನ ಕೊಟ್ಟರೆ ದಂಡ ಖಚಿತ! ಅಪ್ರಾಪ್ತರ ವಾಹನ ಚಾಲನೆಗೆ ಕಡಿವಾಣ ಹಾಕಿರುವ ಉತ್ತರ ಕನ್ನಡ ಪೊಲೀಸರು, 9 ತಿಂಗಳಲ್ಲಿ 131 ಪ್ರಕರಣ ದಾಖಲಿಸಿ ಪೋಷಕರು ಹಾಗೂ ವಾಹನ ಮಾಲೀಕರಿಗೆ ₹13.09 ಲಕ್ಷ ದಂಡ ವಿಧಿಸಿದ್ದಾರೆ.

Banner Ad

2026ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಅಪ್ರಾಪ್ತರು ವಾಹನ ಚಲಾಯಿಸಿದ ಹಾಗೂ ಅವರಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ಪ್ರಕರಣಗಳಿಗೆ ಸಂಬಂಧಿಸಿ ಮೋಟಾರು ವಾಹನ ಕಾಯಿದೆ 1988ರ ಕಲಂ 199(ಎ) ಅಡಿ ಒಟ್ಟು 131 ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಪೋಷಕರು ಹಾಗೂ ವಾಹನ ಮಾಲೀಕರಿಗೆ ಒಟ್ಟು ₹13,09,000 ದಂಡ ವಿಧಿಸಿದೆ.

ದಾಖಲಾದ ಪ್ರಕರಣಗಳಲ್ಲಿ ಭಟ್ಕಳ ಶಹರ ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು 45 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ನ್ಯಾಯಾಲಯವು ₹5,38,500 ದಂಡ ವಿಧಿಸಿದೆ.

ಅಪ್ರಾಪ್ತರಿಗೆ ವಾಹನ ನೀಡುವುದು ಅವರ ಜೀವದ ಜತೆಗೆ ಇತರ ರಸ್ತೆ ಬಳಕೆದಾರರ ಸುರಕ್ಷತೆಗೂ ಅಪಾಯ ಉಂಟುಮಾಡುತ್ತದೆ. ಹೀಗಾಗಿ ಪೋಷಕರು ಹಾಗೂ ವಾಹನ ಮಾಲೀಕರು ಯಾವುದೇ ಕಾರಣಕ್ಕೂ ಅಪ್ರಾಪ್ತರಿಗೆ ದ್ವಿಚಕ್ರ ವಾಹನ, ಕಾರು ಸೇರಿದಂತೆ ಯಾವುದೇ ಮೋಟಾರು ವಾಹನ ನೀಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಜಿಲ್ಲೆಯಾದ್ಯಂತ ತಪಾಸಣೆ ಹಾಗೂ ಕಾನೂನು ಕ್ರಮ ಮುಂದುವರಿಸಲಾಗುವುದು. “ಅಪ್ರಾಪ್ತರಿಗೆ ವಾಹನ ನೀಡಬೇಡಿ; ಅವರ ಸುರಕ್ಷಿತ ಭವಿಷ್ಯವನ್ನು ಕಾಪಾಡಿ” ಎಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.

 

 

 

Please Share: