ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ದೇವಸ್ಥಾನದ ಬೀಗ ಮುರಿದು ಬಂಗಾರ ಹಾಗೂ ಬೆಳ್ಳಿ ಆಭರಣ ಕಳವು ಮಾಡಿದ ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಹೆಬಳೆ ಗ್ರಾಮದ ತಲಹಾ ಕಾಲೋನಿ ಹನಿಪಾಬಾದ್ ನಿವಾಸಿ ಸೈಯದ್ ಯೂನುಸ್ (26) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಈತನನ್ನು ಸೆ.30ರಂದು ಬಂಧಿಸಲಾಗಿದ್ದು, ಆತನಿಂದ ಒಟ್ಟು ₹1.07 ಲಕ್ಷ ಮೌಲ್ಯದ ಕಳವು ಹಾಗೂ ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆ.28ರ ರಾತ್ರಿ 10ರಿಂದ ಸೆ.29ರ ಬೆಳಗಿನ ಜಾವ 5 ಗಂಟೆಯ ನಡುವಿನ ಅವಧಿಯಲ್ಲಿ ಬೆಳಕೆ ಗರಡಿಹಿತ್ಲು ಗ್ರಾಮದ ಶ್ರೀ ಭಂಟಗೊಂಡ ದೇವಸ್ಥಾನದ ಬೀಗ ಹಾಗೂ ಕಟ್ಟಿಗೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ದೇವರ ಕುತ್ತಿಗೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದರು. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯಿಂದ 5.340 ಗ್ರಾಂ ತೂಕದ ಬಂಗಾರದ ಸರ, 20 ಗ್ರಾಂ ತೂಕದ ಬೆಳ್ಳಿಯ ಕರಿಮಣಿ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಮೋಟಾರ್ಸೈಕಲ್ ಸೇರಿದಂತೆ ಒಟ್ಟು ₹1,07,300 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾಣು ಗುಪ್ತಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಭಟ್ಕಳ ಗ್ರಾಮೀಣ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ದಿವಾಕರ ಪಿ.ಎಂ., ಪಿಎಸ್ಐ ಭರಮಪ್ಪ ಬೆಳಗಲಿ, ಪಿಎಸ್ಐ ಮಲ್ಲಿಕಾರ್ಜುನಯ್ಯ ಕೂರಾಣಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


