ವರದಿ: ಮನೋಹರ ಮ.ನು.
ಕಾರವಾರ: ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ವೃತ್ತಿಪರ ತರಬೇತಿಗೂ ಆದ್ಯತೆ ನೀಡಿ, ನಿರಂತರ ಅಭ್ಯಾಸ ಹಾಗೂ ಶಿಸ್ತಿನಿಂದ ಉತ್ತಮ ಸಾಧನೆ ಮಾಡಬೇಕು ಎಂದು ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯ ಪ್ರಾಂಶುಪಾಲ ಪ್ರಸನ್ನ ಗೋಪಾಲ ತೆಂಡೂಲ್ಕರ್ ಹೇಳಿದರು.
ನಗರದ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಶಾರದಾ ಪೂಜೆ ಹಾಗೂ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟೈಪ್ರೈಟಿಂಗ್, ಶೀಘ್ರಲಿಪಿ ಮತ್ತು ಕಂಪ್ಯೂಟರ್ ತರಬೇತಿಯನ್ನು ಕೇವಲ ಉದ್ಯೋಗ ಪಡೆಯುವ ಸಾಧನವಾಗಿ ಪರಿಗಣಿಸದೆ, ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಹಕಾರಿಯಾಗುವ ಕೌಶಲಗಳಾಗಿ ಬೆಳೆಸಿಕೊಳ್ಳಬೇಕು. ಪಾಲಕರ ಒತ್ತಾಯಕ್ಕೆ ಮಾತ್ರ ತರಬೇತಿ ಪಡೆಯದೆ, ಸ್ವಂತ ಆಸಕ್ತಿ ಮತ್ತು ಗುರಿಯೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ತರಬೇತಿಯನ್ನು ಅರ್ಧಕ್ಕೆ ಕೈಬಿಡದೆ ಪೂರ್ಣಗೊಳಿಸಿ, ಜೂನಿಯರ್ ಹಾಗೂ ಸೀನಿಯರ್ ಹಂತದ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆಯುವ ಗುರಿ ಹೊಂದಬೇಕು ಎಂದರು.
ಹಿಂದೆ ಕಾರವಾರದಲ್ಲಿ ಹೆಚ್ಚಿನ ಸಂಖ್ಯೆಯ ಟೈಪ್ರೈಟಿಂಗ್ ತರಬೇತಿ ಸಂಸ್ಥೆಗಳಿದ್ದು, ಪ್ರಸ್ತುತ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಲಭ್ಯವಿರುವ ತರಬೇತಿ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು.
ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕರು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ಪರಿಣತ ಶಿಕ್ಷಕರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ನಿರಂತರ ಪ್ರಯತ್ನದ ಮೂಲಕ ಉನ್ನತ ಸಾಧನೆ ಮಾಡಬೇಕು. ಅಲ್ಲದೆ, ಸುತ್ತಮುತ್ತಲಿನವರಿಗೂ ತರಬೇತಿಯ ಬಗ್ಗೆ ಮಾಹಿತಿ ನೀಡಿ, ಕೌಶಲ ಕಲಿಯಲು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಸುಲಕ್ಷ ಗೋಪಾಲ ತೆಂಡೂಲ್ಕರ್, ಶಿಕ್ಷಕಿಯರಾದ ಶಿಲ್ಪಾ ಎಫ್. ಭಂಡಾರಿ, ಶ್ರೇಯಾ ಯು. ಸೈಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


