ಕರಾವಳಿ ವಾಯ್ಸ್ ನ್ಯೂಸ್
ಗೋಕರ್ಣ: ಖಾಕಿ ಕೈಯಲ್ಲಿ ಕಾನೂನಿನ ಅಸ್ತ್ರ, ರಂಗಸ್ಥಳದಲ್ಲಿ ಯಕ್ಷಗಾನದ ಅಬ್ಬರ! ಮಾದಕ ದ್ರವ್ಯಗಳೆಂಬ ಪಿಡುಗಿನ ವಿರುದ್ಧ ಜನಜಾಗೃತಿ ಮೂಡಿಸಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಈ ಬಾರಿ ವಿಭಿನ್ನ ಹಾದಿ ಹಿಡಿದಿದೆ. ಪೊಲೀಸರೇ ಯಕ್ಷಗಾನ ಕಲಾವಿದರಾಗಿ ರಂಗಕ್ಕಿಳಿದು ‘ಮಾದಕಾಸುರ ಮದಭಂಗ’ದ ಮೂಲಕ ಮಾದಕ ವ್ಯಸನದ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ.

ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ರಾಷ್ಟ್ರೀಯ ಮೋಟಾರ್ ಸೈಕಲ್ ಜಾಥಾ–2026ರ ತಂಡಗಳಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸ್ವಾಗತ ಕೋರಿದೆ. ಇದರ ಅಂಗವಾಗಿ ಅ. 18ರಂದು ಸಂಜೆ 5 ಗಂಟೆಗೆ ಗೋಕರ್ಣದ ಮೇನ್ ಬೀಚ್ನಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಪೊಲೀಸರಿಂದಲೇ ಪ್ರದರ್ಶನಗೊಳ್ಳಲಿರುವ ‘ಮಾದಕಾಸುರ ಮದಭಂಗ’ ಯಕ್ಷಗಾನ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.

ಯಕ್ಷಗಾನದ ಸಾಂಪ್ರದಾಯಿಕ ಕಲೆಯ ಮೂಲಕ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಈ ವಿನೂತನ ಪ್ರಯತ್ನದ ಉದ್ದೇಶವಾಗಿದೆ. ಕಾನೂನು ಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಲೆಯ ಮೂಲಕವೂ ಸಮಾಜದಲ್ಲಿ ಜಾಗೃತಿ ಮೂಡಿಸಬಹುದು ಎಂಬ ಸಂದೇಶವನ್ನು ಜಿಲ್ಲಾ ಪೊಲೀಸ್ ಇಲಾಖೆ ಸಾರುತ್ತಿದೆ.
ಅ. 18ರಂದು ಗೋಕರ್ಣಕ್ಕೆ ಆಗಮಿಸಲಿರುವ ರಾಷ್ಟ್ರೀಯ ಮೋಟಾರ್ ಸೈಕಲ್ ಜಾಥಾ ತಂಡಗಳು, ಅ. 19ರಂದು ಗೋಕರ್ಣದಿಂದ ಕಾರವಾರ ನಗರದ ಮೂಲಕ ಗೋವಾದ ಪಣಜಿಗೆ ಬೈಕ್ ಜಾಥಾ ನಡೆಸಲಿವೆ. ಈ ಜಾಥಾದ ಮೂಲಕ ಮಾದಕ ದ್ರವ್ಯಗಳ ವಿರುದ್ಧ ಹೋರಾಟದ ಸಂದೇಶವನ್ನು ಜನರಿಗೆ ತಲುಪಿಸಲಾಗುತ್ತದೆ.

‘ಮಾದಕ ದ್ರವ್ಯಗಳಿಗೆ ಬೇಡ, ಜೀವನಕ್ಕೆ ಹೌದು’ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಅಭಿಯಾನವು ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜನರ ಸಹಭಾಗಿತ್ವವನ್ನು ಕೋರಿದೆ. ಗೋಕರ್ಣದ ಮೇನ್ ಬೀಚ್ನಲ್ಲಿ ನಡೆಯಲಿರುವ ಯಕ್ಷಗಾನ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಖಾಕಿಯ ಕಾವಲು, ಯಕ್ಷಗಾನದ ಜಾಗೃತಿ — ಮಾದಕ ದ್ರವ್ಯ ಮುಕ್ತ ಸಮಾಜವೇ ಸಂಕಲ್ಪ!


