ಕರಾವಳಿ ವಾಯ್ಸ್ ನ್ಯೂಸ್
ಶಿವಮೊಗ್ಗ: ಸಾಗರ ತಾಲೂಕಿನ ಕರೂರು ಹೋಬಳಿಯ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೊಡನವಳ್ಳಿ ಗ್ರಾಮದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿ ಪುತ್ರ ತ್ರಿಲೋಕ್ ಜೈನ್ (6) ಮೃತಪಟ್ಟ ಬಾಲಕ. ಕಳೆದ ಶನಿವಾರ ಶಾಲೆ ಮುಗಿಯುವ ವೇಳೆಯಲ್ಲಿ ತ್ರಿಲೋಕ್ ಏಕಾಏಕಿ ಶಾಲಾ ಆವರಣದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಶಿಕ್ಷಕರು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗ ಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕನ ಅಕಾಲಿಕ ನಿಧನದಿಂದ ಕುಟುಂಬದಲ್ಲಿ ಆಕ್ರಂದನ ಮನೆ ಮಾಡಿದ್ದು, ಗ್ರಾಮಸ್ಥರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ಹಾಗೂ ಶಾಲೆಯ ಶಿಕ್ಷಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ತ್ರಿಲೋಕ್ಗೆ ಈ ಹಿಂದೆ ಯಾವುದೇ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಪುಟ್ಟ ಬಾಲಕನ ಅಕಾಲಿಕ ಸಾವಿನ ಘಟನೆ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಿಸಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ ಎಂಬ ಚರ್ಚೆಗೆ ಕಾರಣವಾಗಿದೆ.
