ಕರಾವಳಿ ವಾಯ್ಸ್ ನ್ಯೂಸ್ 

ಹಳಿಯಾಳ: ಲಾರಿ ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಳಿಯಾಳ ಪೊಲೀಸರು ತೆಲಂಗಾಣ ರಾಜ್ಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Banner Ad

2014ರಲ್ಲಿ ಹಳಿಯಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಲಾರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಆರು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದರು. ಪ್ರಕರಣದ ಐದನೇ ಆರೋಪಿಯಾಗಿದ್ದ ಬೆಳಗಾವಿ ಮೂಲದ ಮಧು ಯುವರಾಜ್ ಐಹೊಳೆ ಜಾಮೀನು ಪಡೆದು ಬಳಿಕ ತಲೆಮರೆಸಿಕೊಂಡಿದ್ದನು. ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ವಾರಂಟ್ ಜಾರಿಯಾಗಿತ್ತು.

ಆರೋಪಿ ಮಧು ಐಹೊಳೆ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಹುಬ್ಬಳ್ಳಿ ಹಾಗೂ ಬೆಳಗಾವಿಯ ವಿವಿಧ ಪೊಲೀಸ್ ಠಾಣೆಗಳಲ್ಲಿಯೂ ಆತ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಹಲವು ವರ್ಷಗಳಿಂದ ವಿವಿಧ ಕಡೆಗಳಲ್ಲಿ ಅಡಗಿಕೊಂಡು ಪೊಲೀಸರ ಕಣ್ತಪ್ಪಿಸಿಕೊಂಡಿದ್ದ ಆತ ತೆಲಂಗಾಣ ರಾಜ್ಯದ ಮೈಲಾರಂ ಪ್ರದೇಶದಲ್ಲಿ ಇರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಅವರ ನಿರ್ದೇಶನದಂತೆ, ದಾಂಡೇಲಿ ಉಪವಿಭಾಗದ ಡಿವೈಎಸ್ಪಿ ಶಿವಾನಂದ ಮದರಕಂಡಿ ಮತ್ತು ಹಳಿಯಾಳ ಸಿಪಿಐ ಜಯಪಾಲ ಪಾಟೀಲ ನೇತೃತ್ವದಲ್ಲಿ ತಂಡ ರಚಿಸಲಾಯಿತು.

ಪಿಎಸ್‌ಐ ಬಸವರಾಜ ಮಬನೂರು, ಸಿಬ್ಬಂದಿಗಳಾದ ಕೃಷ್ಣ ಅರಕೇರಿ, ವೆಂಕಟೇಶ ತಗ್ಗೀನ, ಬಸವರಾಜ ಹಗರಿ, ಶ್ರೀಶೈಲ ಜಿ.ಎಂ., ಲಕ್ಷಣ ಪೂಜಾರಿ, ವಿನೋದ ಜಿ.ಬಿ. ಹಾಗೂ ರಾಘವೇಂದ್ರ ಅವರನ್ನೊಳಗೊಂಡ ತಂಡ ತೆಲಂಗಾಣಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಹಳಿಯಾಳಕ್ಕೆ ಕರೆತಂದಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

Please Share: