ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿದ ಬಾಳೆಕಾಯಿ ತುಂಬಿದ್ದ ಮಿನಿ ಪಿಕಪ್ ರಸ್ತೆ ಮಧ್ಯೆಯೇ ಪಲ್ಟಿಯಾದ ಪರಿಣಾಮ, ಅದರ ಹಿಂದೆಯೇ ಬರುತ್ತಿದ್ದ ಕಾರು ಅಪಘಾತ ತಪ್ಪಿಸಲು ಹೋಗಿ ಡಿವೈಡರ್ ಏರಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಹಿಕ್ಕಡ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Banner Ad

ಪ್ರಾಥಮಿಕ ಮಾಹಿತಿ ಪ್ರಕಾರ ಅಂಕೋಲಾ ಕಡೆಗೆ ಸಾಗುತ್ತಿದ್ದ ಮಿನಿ ಪಿಕಪ್ ವಾಹನವು ಹಿಕ್ಕಡ ಕ್ರಾಸ್ ಸಮೀಪ ಬಂದಾಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಪಲ್ಟಿಯಾಗಿದೆ. ಅದೇ ವೇಳೆಗೆ ಅದರ ಹಿಂದೆಯೇ ಬರುತ್ತಿದ್ದ ನಿಸಾನ್ ಕಾರಿನ ಚಾಲಕ ಮುಂದಿದ್ದ ಅಪಘಾತವನ್ನು ಗಮನಿಸಿ ವಾಹನವನ್ನು ರಸ್ತೆ ಬದಿಗೆ ತಿರುಗಿಸಿ ಅಪಘಾತ ತಪ್ಪಿಸಲು ಯತ್ನಿಸಿದ್ದಾರೆ. ಆದರೆ, ವೇಗ ನಿಯಂತ್ರಣಕ್ಕೆ ಬಾರದೆ ಕಾರು ಡಿವೈಡರ್ ಮೇಲಿದ್ದ ವಿದ್ಯುತ್ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎಂದು ತಿಳಿದುಬಂದಿದೆ.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಮಿನಿ ಪಿಕಪ್‌ಗೂ ಹಾನಿಯಾಗಿದೆ. ಎರಡೂ ವಾಹನಗಳಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳೀಯರು ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಂಕೋಲಾ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

 

 

Please Share: