ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ, ಜೂ.21: ಕೊಲೆ ಹಾಗೂ ಸರಣಿ ಮನೆಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರವಾರ ನಗರ ಠಾಣೆ ಪೊಲೀಸರು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಬಂಧಿಸಿದ್ದಾರೆ.

ಬಂಧಿತನನ್ನು ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ನಿವಾಸಿ, ಹಾಲಿ ಹಾರವಾಡದ ವಿವೇಕ ಅಲಿಯಾಸ್ ವಿವೇಕಾನಂದ ದುರ್ಗಯ್ಯಾ ಖಾರ್ವಿ ಎಂದು ಗುರುತಿಸಲಾಗಿದೆ.

ಆರೋಪಿ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ ಸೇರಿದಂತೆ ಕಾರವಾರ ನಗರ, ಅಂಕೋಲಾ, ಕುಮಟಾ ಹಾಗೂ ಗೋಕರ್ಣ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು ಒಂಬತ್ತು ಮನೆಕಳ್ಳತನ ಪ್ರಕರಣಗಳಿವೆ. ಈ ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ಸುಮಾರು ಒಂದು ವರ್ಷದಿಂದ ಆತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಕಾರವಾರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ ವಿ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಕಾರವಾರ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೆ ನೇತೃತ್ವದಲ್ಲಿ, ಪೊಲೀಸ್ ಉಪನಿರೀಕ್ಷಕ ಉದ್ದಪ್ಪ ಎ. ಧರೆಪ್ಪನವರ, ಸಿಪಿಸಿ ಗುರು ನಾಯಕ್ ಹಾಗೂ ಸಿಪಿಸಿ ರಾಜೇಶ್ ನಾಯಕ್ ಅವರ ತಂಡ ಮೊಬೈಲ್ ಕರೆ ವಿವರಗಳು (ಸಿಡಿಆರ್) ಮತ್ತು ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಆರೋಪಿಯ ಸುಳಿವು ಪತ್ತೆಹಚ್ಚಿತು. ಬಳಿಕ ಜೂ.15ರಂದು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಆರೋಪಿಯನ್ನು ಬಂಧಿಸಿ, ಜೂ. 16ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

 

Please Share: