ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಹೊಟೇಗಾಳಿ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 34.500 ಲೀಟರ್ ಗೋವಾ ಮದ್ಯ ಹಾಗೂ 65 ಲೀಟರ್ ಗೋವಾ ಬಿಯರ್ನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನ.14ರಂದು ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ ಹಾಗೂ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಅಧಿಕಾರಿಗಳು ವಿಜಯ ಪಡುವಳಕರ ಅವರಿಗೆ ಸೇರಿದ ಮನೆ ಮೇಲೆ ದಾಳಿ ನಡೆಸಿ ಶೋಧಿಸಿದಾಗ ಈ ಅಕ್ರಮ ದಾಸ್ತಾನು ಪತ್ತೆಯಾಗಿದೆ. ವಶಪಡಿಸಿಕೊಂಡ ಮದ್ಯ ಹಾಗೂ ಬಿಯರ್ನ ಒಟ್ಟು ಮೌಲ್ಯ ₹42,500 ಎಂದು ಅಂದಾಜಿಸಲಾಗಿದೆ.
ದಾಳಿ ವೇಳೆ ಮನೆಯ ಮಾಲೀಕ ವಿಜಯ ಪಡುವಳಕರ ಸ್ಥಳದಲ್ಲಿ ಇರಲಿಲ್ಲ. ಈ ಸಂಬಂಧ ಅಬಕಾರಿ ನಿರೀಕ್ಷಕಿ ಸುನೀತಾ ಪ್ರಕರಣ ದಾಖಲಿಸಿದ್ದು, ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಅಬಕಾರಿ ಉಪನಿರೀಕ್ಷಕ ಶಿವಶಂಕರ ಯು., ಪೇದೆ ನವೀನ್ ನಾಯಕ್ ಬಿ. ಹಾಗೂ ವಾಹನ ಚಾಲಕ ಬಾಲಚಂದ್ರ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.


