ಕರಾವಳಿ ವಾಯ್ಸ್ ನ್ಯೂಸ್ 

Banner Ad

ಕಾರವಾರ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಲಾಭವನ್ನು ಬಿಜೆಪಿಯವರೇ ಹೆಚ್ಚು ಪಡೆಯುತ್ತಿದ್ದಾರೆ. ಈ ಕುರಿತು ಸರಾಸರಿ ವರದಿ ಸಿದ್ಧಪಡಿಸಲಾಗುತ್ತಿದ್ದು, ಯಾರು, ಯಾವ ಜಿಲ್ಲೆಯಲ್ಲಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ಶಾಸಕ ಸತೀಶ್ ಸೈಲ್ ಹೇಳಿದರು.

ಕಾರವಾರದಲ್ಲಿ ಮಾತನಾಡಿದ ಅವರು, ಪಟ್ಟಿ ಸಿದ್ಧವಾದ ಬಳಿಕ ಪ್ರತಿ ಜಿಲ್ಲೆಯಲ್ಲಿಯೂ ಅದನ್ನು ಬೋರ್ಡ್‌ನಲ್ಲಿ ಪ್ರಕಟಿಸಲಾಗುವುದು. ಗ್ಯಾರಂಟಿ ಯೋಜನೆಗಳಿಗಾಗಿ ಬೆಲೆ ಏರಿಕೆ ಮಾಡುತ್ತಿಲ್ಲ. ಬಜೆಟ್‌ನಲ್ಲಿಯೇ ಅಗತ್ಯ ಅನುದಾನ ಮೀಸಲಿಡಲಾಗಿದೆ. ದೀಪಾವಳಿ ಉಡುಗೊರೆಯಾಗಿ ಮೂರು ತಿಂಗಳ ಗೃಹಲಕ್ಷ್ಮಿ ಹಣವನ್ನು ಒಟ್ಟಿಗೆ ಜಮೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಅವಧಿಯಲ್ಲಿ ತಮಗೆ ಸುಮಾರು 1,500 ಕೋಟಿ ರೂ. ಅನುದಾನ ದೊರೆತಿದೆ. ಇಲಾಖೆವಾರು ಖರ್ಚಿನ ಸಂಪೂರ್ಣ ಲೆಕ್ಕ ನೀಡಲು ಸಿದ್ಧನಿದ್ದೇನೆ. ಸುಳ್ಳಾಗಿದ್ದರೆ ರಸ್ತೆಯಲ್ಲಿ ನಿಲ್ಲಿಸಿ ಬೇಕಾದರೂ ಪ್ರಶ್ನಿಸಿ ಎಂದು ಸವಾಲು ಹಾಕಿದರು.

ಪ್ರತಿ ತಾಲೂಕಿಗೆ 50 ಕೋಟಿ ರೂ. ಹಾಗೂ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಜನರಿಗೆ ಅಗತ್ಯವಿರುವ ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಪ್ರತ್ಯೇಕವಾಗಿ ಕರೆ ಮಾಡಿ ತಿಳಿಸಿದ್ದಾರೆ ಎಂದರು.

ಬಿಜೆಪಿ ಶಾಸಕರಿಗೂ ಅನುದಾನ ನೀಡಲಾಗುತ್ತಿದ್ದು, ಅನುಪಾತದಲ್ಲಿ ವ್ಯತ್ಯಾಸವಿರಬಹುದು. ಯಾರನ್ನೂ ಖಾಲಿ ಕೈಯಲ್ಲಿ ಕಳುಹಿಸುವುದಿಲ್ಲ. ಕನಿಷ್ಠ ಶೇ.50ರಷ್ಟಾದರೂ ಬಿಜೆಪಿ ಶಾಸಕರಿಗೆ ಅನುದಾನ ದೊರೆಯಲಿದೆ ಎಂದು ಸತೀಶ್ ಸೈಲ್ ತಿಳಿಸಿದರು.

 

 

Please Share: