ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಮೂರನೇ ಬಾರಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್ ದಾಖಲೆ ಬರೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರನ್ನು 9,323 ಮತಗಳ ಅಂತರದಿಂದ ಸೋಲಿಸಿದ್ದಾರೆ.

Banner Ad

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಅ.27ರ ಬೆಳಿಗ್ಗೆ ಆರಂಭವಾದ ಮತ ಎಣಿಕೆ ಅ.28ರ ಮಧ್ಯರಾತ್ರಿ 2 ಗಂಟೆಗೆ ಮುಕ್ತಾಯಗೊಂಡಿತು. ಸಂಕನೂರ 33,711 ಮತಗಳನ್ನು ಪಡೆದರೆ, ಮೋಹನ್ ಲಿಂಬಿಕಾಯಿ 24,388 ಮತಗಳನ್ನು ಗಳಿಸಿದರು. ಪಕ್ಷೇತರ ಅಭ್ಯರ್ಥಿ ಕಾಂತಕುಮಾರ ಆರ್. 4,055 ಮತಗಳನ್ನು ಪಡೆದರು.

ಪಕ್ಷೇತರ ಅಭ್ಯರ್ಥಿಗಳಾದ ಡಾ.ಜಿ.ಎಚ್. ಇಮ್ರಾಪುರ 338, ಉಮೇಶ ಕೃಷ್ಣಪ್ಪ ದೈವಜ್ಞ 228, ನಿಶಾಂತ ಶಂಕರ ಬಂಕಾಪುರ 143, ಅಬ್ದುಲ್ ಮನ್ನಾನ 120, ಸಂತೋಷ ಮನೋಹರ ವೆರ್ಣಿಕರ 85, ಜೀಶಾನ್ ಅಹ್ಮದ್‌ಖಾನ್ ಪಠಾಣ್ 62, ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ 55, ತಳವಾರ ಶಿವಕುಮಾರ 42, ಜಿಶಾನ್ ಡಿ. ಶಿರಸಂಗಿ 39 ಹಾಗೂ ಬಸವರಾಜ ಶಂಕರಪ್ಪ ಕೊಟಗಿ 39 ಮತಗಳನ್ನು ಪಡೆದರು. ಕೆ.ಆರ್.ಎಸ್. ಅಭ್ಯರ್ಥಿ ಕೃಷ್ಣ ಎಚ್. ಬಳೆಗಾರ 141 ಮತಗಳನ್ನು ಗಳಿಸಿದರು. ಒಟ್ಟು 73,691 ಮತಗಳಲ್ಲಿ 63,446 ಮತಗಳು ಮಾನ್ಯವಾಗಿದ್ದು, 10,245 ಮತಗಳು ತಿರಸ್ಕೃತಗೊಂಡಿವೆ.

ಅ.23ರಂದು ನಡೆದ ಚುನಾವಣೆಯಲ್ಲಿ ಒಟ್ಟು 97,400 ಮತದಾರರ ಪೈಕಿ 73,658 ಮಂದಿ ಮತ ಚಲಾಯಿಸಿದ್ದು, ಶೇ.75.62ರಷ್ಟು ಮತದಾನವಾಗಿತ್ತು. ಮತ ಎಣಿಕೆ ಪೂರ್ಣಗೊಂಡ ಬಳಿಕ ಚುನಾವಣಾಧಿಕಾರಿಯಾಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅವರು ಸಂಕನೂರ ಆಯ್ಕೆಯನ್ನು ಪ್ರಕಟಿಸಿದರು.

 

 

Please Share: