ಕರಾವಳಿ ವಾಯ್ಸ್ ನ್ಯೂಸ್ 

ಯಲ್ಲಾಪುರ: ಹುಟ್ಟುಹಬ್ಬವೆಂದರೆ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಯಲ್ಲಾಪುರದ ಬಾಲಕಿಯೊಬ್ಬಳು ತನ್ನ 13ನೇ ವರ್ಷದ ಹುಟ್ಟುಹಬ್ಬವನ್ನು ಅನಾಥಾಶ್ರಮದ ಮಕ್ಕಳೊಂದಿಗೆ ಆಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾಳೆ.

Banner Ad

ಯಲ್ಲಾಪುರದ ನಾಗರಾಜ ನಾಯ್ಕ ಅವರ ಪುತ್ರಿ ಲಾವಣ್ಯ ನಾಗರಾಜ್ ನಾಯ್ಕ (13) ಈ ಮಾದರಿ ಕಾರ್ಯ ಕೈಗೊಂಡ ಬಾಲಕಿ. ಗುರುವಾರ ತನ್ನ ಹುಟ್ಟುಹಬ್ಬದ ಅಂಗವಾಗಿ ಯಲ್ಲಾಪುರ ಪಟ್ಟಣದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಅನಾಥಾಶ್ರಮಕ್ಕೆ ತೆರಳಿ ಅಲ್ಲಿನ ನಿವಾಸಿಗಳೊಂದಿಗೆ ಸಂಭ್ರಮ ಹಂಚಿಕೊಂಡಳು.

ಹುಟ್ಟುಹಬ್ಬದ ವಿಶೇಷವಾಗಿ ಅನಾಥಾಶ್ರಮದಲ್ಲಿದ್ದವರಿಗೆ ಸೀರಾ ಹಾಗೂ ಸಿಹಿತಿಂಡಿಗಳನ್ನು ವಿತರಿಸಿ, ಅವರೊಂದಿಗೆ ಕೆಲಕಾಲ ಬೆರೆತು ಸಂತಸ ಹಂಚಿಕೊಂಡಳು. ಸಾಮಾನ್ಯವಾಗಿ ತನ್ನ ಸಂತೋಷಕ್ಕೆ ಮಾತ್ರ ಸೀಮಿತವಾಗಬಹುದಾದ ಹುಟ್ಟುಹಬ್ಬವನ್ನು, ಇತರರ ಮುಖದಲ್ಲಿ ನಗು ಮೂಡಿಸುವ ದಿನವನ್ನಾಗಿ ಪರಿವರ್ತಿಸಿರುವುದು ಲಾವಣ್ಯಳ ಕಾರ್ಯಕ್ಕೆ ವಿಶೇಷ ಮೆಚ್ಚುಗೆಗೆ ಕಾರಣವಾಗಿದೆ.

45ಕ್ಕೂ ಹೆಚ್ಚು ಮಂದಿ ಆಶ್ರಯ

ಈ ಅನಾಥಾಶ್ರಮದಲ್ಲಿ ಒಟ್ಟು 45 ಮಂದಿ ವಾಸವಾಗಿದ್ದು, ಅವರಲ್ಲಿ ಸುಮಾರು 22 ಮಂದಿ ಸಣ್ಣ ಮಕ್ಕಳು ಇದ್ದಾರೆ. ಉಳಿದಂತೆ ವಯೋವೃದ್ಧರೂ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಕುಟುಂಬದ ಆಸರೆಯಿಲ್ಲದವರೊಂದಿಗೆ ಹುಟ್ಟುಹಬ್ಬದ ಸಂಭ್ರಮ ಹಂಚಿಕೊಂಡ ಲಾವಣ್ಯ, ‘ಸಂತೋಷವನ್ನು ಹಂಚಿಕೊಂಡಾಗ ಅದು ಮತ್ತಷ್ಟು ಹೆಚ್ಚುತ್ತದೆ’ ಎಂಬ ಸಂದೇಶ ಸಾರಿದ್ದಾಳೆ.

ಬಾಲ್ಯದಲ್ಲಿಯೇ ಇಂತಹ ಸಾಮಾಜಿಕ ಕಾಳಜಿ ಬೆಳೆಸಿಕೊಂಡಿರುವ ಲಾವಣ್ಯಳ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹುಟ್ಟುಹಬ್ಬದ ಆಚರಣೆಯನ್ನು ಸೇವೆಯೊಂದಿಗೆ ಬೆಸೆದು, ಇತರ ಮಕ್ಕಳಿಗೂ ಮಾದರಿಯಾದ ಬಾಲಕಿ ಎಂಬ ಪ್ರಶಂಸೆ ಲಾವಣ್ಯಳಿಗೆ ವ್ಯಕ್ತವಾಗಿದೆ.

 

 

Please Share: