ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ತಾಲೂಕಿನ ಹಳಗಾ ಗ್ರಾಮದ ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಧಾರ್ಮಿಕ ಪರಂಪರೆ ಹಾಗೂ ಆಚರಣೆಗಳ ಕುರಿತು ತಿಳಿದುಕೊಳ್ಳುವ ಉದ್ದೇಶದಿಂದ ಆಡಳಿತ ಮಂಡಳಿ ಅಧ್ಯಕ್ಷ ಕುಮಾರ ನಾಯ್ಕ ಅವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಅಷ್ಟಮಂಗಲ ಪ್ರಶ್ನೆ ಕಾರ್ಯ ಶುಕ್ರವಾರ ನಡೆಯಿತು.

Banner Ad

ದೇವಾಲಯದಲ್ಲಿ ಪ್ರಸ್ತುತ ನಡೆಯುತ್ತಿರುವ ಧಾರ್ಮಿಕ ಕಾರ್ಯಗಳು ಸಂಪ್ರದಾಯದಂತೆ ನಡೆಯುತ್ತಿವೆಯೇ, ಹಿಂದಿನ ಕಾಲದಲ್ಲಿ ಆಚರಣೆಯಲ್ಲಿದ್ದ ಯಾವ ಪದ್ಧತಿಗಳು ಕಾಲಕ್ರಮೇಣ ಮರೆಯಾಗಿವೆ ಹಾಗೂ ಅವುಗಳನ್ನು ಮತ್ತೆ ಜಾರಿಗೆ ತರಬೇಕೇ ಎಂಬ ಕುರಿತು ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಊರಿನ ಹಿರಿಯರು ಚರ್ಚಿಸಿ ಅಷ್ಟಮಂಗಲ ಪ್ರಶ್ನೆ ಕಾರ್ಯ ಹಮ್ಮಿಕೊಳ್ಳಲು ನಿರ್ಧರಿಸಿದ್ದರು.

ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಾಲಯಕ್ಕೆ ಸಂಬಂಧಿಸಿದ ಹಲವು ಲೋಪದೋಷಗಳು ಕಂಡುಬಂದಿವೆ ಎನ್ನಲಾಗಿದ್ದು, ಅವುಗಳ ಪರಿಹಾರಕ್ಕಾಗಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವಂತೆ ಅಷ್ಟಮಂಗಲ ಪ್ರಶ್ನೆಯ ಅರ್ಚಕ ನಾಗಾನಂದ ಭಟ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ದೇವಾಲಯದ ಪುರಾತನ ಸಂಪ್ರದಾಯ ಹಾಗೂ ಹಿಂದಿನ ಆಚರಣೆಗಳಿಗೆ ಅನುಗುಣವಾಗಿ ಧಾರ್ಮಿಕ ಕಾರ್ಯಗಳನ್ನು ಮುಂದುವರಿಸಲು ಈ ಅಷ್ಟಮಂಗಲ ಪ್ರಶ್ನೆ ಮಾರ್ಗದರ್ಶನ ನೀಡಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಊರಿನ ಹಿರಿಯರು, ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

 

 

 

 

 

Please Share: