ಕರಾವಳಿ ವಾಯ್ಸ್ ನ್ಯೂಸ್
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ; ಉದ್ಯೋಗ, ಮೂಲಸೌಕರ್ಯ, ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ
ಕಾರವಾರ: ಪದವೀಧರರ ಹಕ್ಕುಗಳ ರಕ್ಷಣೆ, ಯುವಜನರಿಗೆ ಉದ್ಯೋಗಾವಕಾಶ, ಉತ್ತರ ಕನ್ನಡದ ಸಮಗ್ರ ಅಭಿವೃದ್ಧಿ ಹಾಗೂ ಕಿತ್ತೂರು ಕಲ್ಯಾಣ ಕರ್ನಾಟಕ ಭಾಗದ ನ್ಯಾಯಯುತ ಬೇಡಿಕೆಗಳ ಈಡೇರಿಕೆಯನ್ನು ಗುರಿಯಾಗಿಸಿಕೊಂಡು ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ ಪಕ್ಷದ ಅಧಿಕೃತ ಅಭ್ಯರ್ಥಿ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಅವರು ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಣದಲ್ಲಿದ್ದಾರೆ.
ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಅವರು ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ಸ್ಪರ್ಧಿಸಿದ್ದು, ಅಕ್ಟೋಬರ್ 23ರಂದು ನಡೆಯುವ ಚುನಾವಣೆಯಲ್ಲಿ ಮತಪತ್ರದ ಕ್ರಮ ಸಂಖ್ಯೆ 04ರಲ್ಲಿ ಅವರ ಹೆಸರು ಇರಲಿದೆ. ಪದವೀಧರ ಮತದಾರರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸುವಂತೆ ಪಕ್ಷ ಮನವಿ ಮಾಡಿದೆ.

ಉತ್ತರ ಕನ್ನಡದ ಅಭಿವೃದ್ಧಿಗೆ ಪ್ರಮುಖ ಆದ್ಯತೆ
ಜಿಲ್ಲೆಯ ಅರಣ್ಯ ಪ್ರದೇಶದ ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್, ಮೊಬೈಲ್ ನೆಟ್ವರ್ಕ್ ಹಾಗೂ ಬೀದಿದೀಪಗಳ ಸೌಲಭ್ಯ ಕಲ್ಪಿಸುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು, ಸೀಬರ್ಡ್ ಮತ್ತು ಕೈಗಾ ಯೋಜನೆಗಳಲ್ಲಿ ಸ್ಥಳೀಯ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಪರಿಸರಸ್ನೇಹಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವುದು ಪಕ್ಷದ ಪ್ರಮುಖ ಉದ್ದೇಶಗಳಾಗಿವೆ.
ಇದರ ಜತೆಗೆ ಕಿತ್ತೂರು ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ವಿಧಾನದ ಸೌಲಭ್ಯ ವಿಸ್ತರಣೆ, ತಾಲೂಕು ಮಟ್ಟದಲ್ಲಿ ಕೈಗಾರಿಕೆಗಳ ಸ್ಥಾಪನೆ, ಉನ್ನತ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ, ಸ್ಥಳೀಯರಿಗೆ ಬ್ಯಾಂಕ್ಗಳಲ್ಲಿ ಉದ್ಯೋಗಾವಕಾಶ, ನೆರೆ-ಬರಕ್ಕೆ ಶಾಶ್ವತ ಪರಿಹಾರ ಹಾಗೂ ಕೃಷ್ಣಾ ಮೇಲ್ದಂಡೆ ಮತ್ತು ಮಹದಾಯಿ ಯೋಜನೆಗಳ ಪೂರ್ಣಗೊಳಿಸುವಿಕೆಗಾಗಿ ಹೋರಾಟ ನಡೆಸುವ ಆಶಯ ಹೊಂದಲಾಗಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆಡಳಿತಾತ್ಮಕ ಕಾರ್ಯಾಲಯಗಳ ಸ್ಥಾಪನೆ ಹಾಗೂ ಪ್ರಾದೇಶಿಕ ಅಭಿವೃದ್ಧಿಗೂ ಪಕ್ಷ ಆದ್ಯತೆ ನೀಡಿದೆ.
ಪದವೀಧರರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ, ಯುವಜನರಿಗೆ ಉದ್ಯೋಗ, ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಮೂಲಸೌಕರ್ಯ ಮತ್ತು ಉತ್ತರ ಕನ್ನಡದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುವ ಆಶಯದೊಂದಿಗೆ ಪಕ್ಷ ಮತದಾರರ ಬೆಂಬಲ ಕೋರಿದೆ.
ಪದವೀಧರರ ಧ್ವನಿಗೆ ಬಲ ತುಂಬಲು, ಉತ್ತರ ಕನ್ನಡದ ಅಭಿವೃದ್ಧಿಯ ಬೇಡಿಕೆಗಳನ್ನು ಮುನ್ನೆಲೆಗೆ ತರಲು ಅಕ್ಟೋಬರ್ 23ರಂದು ಮತಪತ್ರದ ಕ್ರಮ ಸಂಖ್ಯೆ 04ರ ಎದುರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಅವರನ್ನು ಬೆಂಬಲಿಸುವಂತೆ ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಿದ್ದನಗೌಡ ಎಸ್. ಪಾಟೀಲ ಹಾಗೂ ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ.



