ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಅರಣ್ಯ ಇಲಾಖೆ ನಾಲ್ವರನ್ನು ಬಂಧಿಸಿದೆ.

Banner Ad

ಪ್ರಕರಣಕ್ಕೆ ಸಂಬಂಧಿಸಿ ಉಂಬಳೇಕೊಪ್ಪದ ಸಂತೋಷ ಸಣ್ಯಾ ನಾಯ್ಕ (35), ನವೀನ ಚಂದ್ರಶೇಖರ ದೇವಡಿಗ (30), ಸಹಸ್ರಳ್ಳಿಯ ಮಂಜುನಾಥ ಮಾದೇವ ಗೌಡ (39) ಹಾಗೂ ಮುಂಡಿಗೆಹಳ್ಳಿಯ ಜನಾರ್ಧನ ಗಣಪತಿ ಗೌಡ (29) ಅವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಳಿಕ ಶಿರಸಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಗೋಳಿಕಟ್ಟಾ ಗ್ರಾಮದ ಅರಣ್ಯ ಸರ್ವೇ ನಂ.20ರಲ್ಲಿ ಶ್ರೀಗಂಧ ಮರಗಳ ಅಕ್ರಮ ಕಡಿತವಾಗಿರುವ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮರಗಳನ್ನು ಕಡಿದು ತುಂಡುಗಳಾಗಿ ಮಾಡಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ 7 ಶ್ರೀಗಂಧದ ಬುಡಚಿಗಳು ಹಾಗೂ 21 ನಗಗಳು ದೊರೆತಿದ್ದು, ಹಸಿ ಸಿಪ್ಪೆ ಸಹಿತ ಒಟ್ಟು 50.010 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಲಾಗಿದೆ.

ಈ ಕುರಿತು ಬನವಾಸಿ ವಲಯದಲ್ಲಿ ROR No.16/2026-27ರಂತೆ ಪ್ರಕರಣ ದಾಖಲಿಸಲಾಗಿದ್ದು, ಕರ್ನಾಟಕ ಅರಣ್ಯ ಕಾಯ್ದೆಯ ವಿವಿಧ ಕಲಂಗಳು ಹಾಗೂ ಕರ್ನಾಟಕ ಅರಣ್ಯ ನಿಯಮ 1969ರ ನಿಯಮ 154ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಶ್ರೀಗಂಧ ಅಕ್ರಮ ಕಡಿತದ ಹಿಂದಿರುವ ಮತ್ತಷ್ಟು ಮಾಹಿತಿಗಾಗಿ ತನಿಖೆ ಮುಂದುವರಿದಿದೆ.

ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ ಚವ್ಹಾಣ ಅವರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಕಾರ್ತೀಕ ಕಂಬಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅರಣ್ಯ ಸಿಬ್ಬಂದಿ ಹಾಗೂ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

 

 

Please Share: