ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ನಗರದ ನಾಲ್ವರು ವಿದ್ಯಾರ್ಥಿಗಳು ಪ್ರಶಸ್ತಿ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಮೂವರು ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟೆ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದರೆ, ಮತ್ತೊಬ್ಬ ವಿದ್ಯಾರ್ಥಿ ಎರಡು ವಿಭಾಗಗಳಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

Banner Ad

ರವಿವಾರ ನಗರದ ಕಾಜುಬಾಗ್ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಕರಾಟೆ-ದೋ ಕೆನ್‌ರ್ಯೂಕನ್ ಶೊಟೋಕಾನ್ ಸ್ಟೈಲ್, ಇಂಡಿಯಾ ವತಿಯಿಂದ 2ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್–ಕಾರವಾರ ಟ್ರೋಫಿ 2026 ನಡೆಯಿತು. ಈ ಸಂಸ್ಥೆಯು ಜಪಾನ್‌ನ ಕರಾಟೆ-ದೋ ಕೆನ್‌ರ್ಯೂಕನ್ ಶೊಟೋಕಾನ್ ವಿಭಾಗದೊಂದಿಗೆ ಸಂಯೋಜಿತವಾಗಿದ್ದು, ಜಪಾನ್ ಕರಾಟೆ-ದೋ ಫೆಡರೇಶನ್ ಸದಸ್ಯತ್ವ ಹೊಂದಿದೆ.

ಶಿವಾಜಿ ಬಾಲಮಂದಿರ ಶಾಲೆಯ ವಿದ್ಯಾರ್ಥಿನಿ ಆರ್ಯಾಹಿ ಪ್ರದೀಪ್ ಬಾಂದೇಕರ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ನಿರ್ಮಲಾ ರಾಣಿ ಶಾಲೆಯ ಶರ್ಮಿಷ್ಠಾ ತಳೆಕರ ಕಟಾ ಮತ್ತು ಕುಮಿಟೆ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬಾಡ್‌ನ ಎಸ್‌ಎಂಟಿ ರಮಾಬಾಯಿ ಹನುಮಂತ ಬೆಣ್ಣೆ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅನ್ಶಾ ಗಣರಾಜ್ ನಾರ್ವೇಕರ ಕೂಡ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸೇಂಟ್ ಮೈಕಲ್ಸ್ ಕಾನ್ವೆಂಟ್ ಹೈಸ್ಕೂಲ್‌ನ ಸೋಹಮ್ ಮನೋಜ್ ಬಾಂದೇಕರ ಕುಮಿಟೆ ವಿಭಾಗದಲ್ಲಿ ದ್ವಿತೀಯ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ಈ ನಾಲ್ವರೂ ಕಾರವಾರದ ಗುರುಕುಲ ಕಲಾ ಪ್ರಗತಿ ಕೇಂದ್ರದಲ್ಲಿ ಕರಾಟೆ ಗುರು ಪ್ರದೀಪ್ ಬಾಂದೇಕರ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆರ್ಯಾಹಿ ಅವರು ಪ್ರದೀಪ್ ಬಾಂದೇಕರ ಅವರ ಪುತ್ರಿಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

 

 

Please Share: