ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ಯಕ್ಷಗಾನ ಕೇವಲ ಮನರಂಜನೆಯ ಕಲೆಯಲ್ಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿದ ಮಹತ್ವದ ಕಲೆ. ಅದರ ಕಥನಗಳ ಸಾರವನ್ನು ಅರ್ಥಮಾಡಿಕೊಂಡು ಯಕ್ಷಗಾನವನ್ನು ಮನೆ–ಮನದ ಆಟವನ್ನಾಗಿ ಸ್ವೀಕರಿಸಬೇಕು ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ಹೇಳಿದರು.

ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ಮತ್ತು ಸಿಲೆಕ್ಟ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿರುವ ‘ಯಕ್ಷ ಪೂರ್ಣಿಮೆ–2026’ ಯಕ್ಷಗಾನ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಾವಿದರು ಇತರರನ್ನು ಅನುಕರಿಸುವ ಬದಲು ಅವರಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಯಕ್ಷಗಾನವನ್ನು ಕರಗತ ಮಾಡಿಕೊಂಡು, ಅದರ ಸಾಂಪ್ರದಾಯಿಕ ಮೌಲ್ಯ ಹಾಗೂ ಶ್ರೇಷ್ಠತೆಯನ್ನು ಉಳಿಸಿಕೊಂಡು ಪ್ರದರ್ಶಿಸಬೇಕು. ಕಲೆ ಕೇವಲ ಪ್ರೇಕ್ಷಕರ ಚಪ್ಪಾಳೆಗೆ ಸೀಮಿತವಾಗಬಾರದು ಎಂದರು.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಾನಂದ ಹೆಗಡೆ ಕೆರೆಮನೆ ಮಾತನಾಡಿ, ಮಾರುತಿ ಗುರೂಜಿ ಅವರ ನೇತೃತ್ವದಲ್ಲಿ ಬಂಗಾರಮಕ್ಕಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಉತ್ತರ ಕನ್ನಡದ ಹೆಮ್ಮೆಯ ತಾಣವಾಗಿದೆ ಎಂದರು. ಕಲೆ, ಸಂಸ್ಕೃತಿ, ಶಿಕ್ಷಣ ಹಾಗೂ ಪರಿಸರ ಸಂರಕ್ಷಣೆಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದ್ದು, ಜಿಲ್ಲೆಯ ಮಠಮಾನ್ಯಗಳು ಯಕ್ಷಗಾನಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಐರೋಡಿ ಮಾತನಾಡಿ, ಯಕ್ಷಗಾನದ ಸಂಪ್ರದಾಯಬದ್ಧ ಸ್ವರೂಪ ಉಳಿಸುವ ಜವಾಬ್ದಾರಿ ಕಲಾ ಕೇಂದ್ರಗಳು ಹಾಗೂ ಕಲಾವಿದರ ಮೇಲಿದೆ. ಮಕ್ಕಳಿಗೆ ಯಕ್ಷಗಾನ ಕಲಿಯುವ ಅವಕಾಶ ಹೆಚ್ಚಬೇಕು ಎಂದರು.
ವಿಶ್ರಾಂತ ಪ್ರಾಂಶುಪಾಲ ವಿ.ಜಿ. ಹೆಗಡೆ ಗುಡ್ಗೆ, ಪರಿಸರ ವಿಜ್ಞಾನಿ ಹಾಗೂ ವನ್ಯಜೀವಿ ತಜ್ಞ ಡಾ. ಎನ್.ಎಂ. ಗುರುಪ್ರಸಾದ್, ಯಕ್ಷಗಾನ ತರಬೇತುದಾರ ಉಮೇಶ್ ಭಟ್ ಬಾಡ ಮಾತನಾಡಿದರು. ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟು, ಕಲೆಯ ಘನತೆ ಹಾಗೂ ಕರಾವಳಿಯ ಭಾಷಾ ಸೌಂದರ್ಯ ಉಳಿಸುವಲ್ಲಿ ಯಕ್ಷಗಾನದ ಪಾತ್ರವನ್ನು ಅವರು ವಿವರಿಸಿದರು.
ಶೈಲೇಶ್ ಕುಮಟಾ ಕಾರ್ಯಕ್ರಮ ನಿರೂಪಿಸಿದರು. ಉತ್ಸವದ ಅಂಗವಾಗಿ ‘ಹೇರಂಭ ವಿಜಯ (ಭೂ ಕೈಲಾಸ)’ ಯಕ್ಷಗಾನ ಪ್ರದರ್ಶನ ನಡೆಯಿತು.


