ಕರಾವಳಿ ವಾಯ್ಸ್ ನ್ಯೂಸ್ 

ತದಡಿ: ತದಡಿ ಹಾಗೂ ಮುಡಂಗಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ನಿಯಮಾನುಸಾರ ಅಗತ್ಯ ಅನುಮತಿ ಪಡೆದೇ ಪ್ರವಾಸಿ ಬೋಟಿಂಗ್ ನಡೆಸಲಾಗುತ್ತಿದ್ದು, ಕೆಲವರು ಮಾಡುತ್ತಿರುವ ಆಧಾರರಹಿತ ಆರೋಪಗಳಿಂದ ಪ್ರವಾಸೋದ್ಯಮಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಪ್ರವಾಸಿ ಬೋಟ್ ಮಾಲೀಕರು ತಿಳಿಸಿದ್ದಾರೆ.

Banner Ad

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರವಾಸೋದ್ಯಮ ಇಲಾಖೆಯ ನಿರ್ದೇಶನದಂತೆ ವಿಮಾ ಪತ್ರ, ಸ್ಥಳೀಯ ಗ್ರಾಮ ಪಂಚಾಯಿತಿ ಎನ್‌ಒಸಿ, ಬಂದರು ಇಲಾಖೆಯ ಎನ್‌ಒಸಿ, ಬೋಟ್ ನೋಂದಣಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಬೋಟಿಂಗ್ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತದಡಿ ಮತ್ತು ಮುಡಂಗಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿದಂತೆ 20 ಪ್ರವಾಸಿ ಬೋಟ್‌ಗಳಿಗೆ ಮಾತ್ರ ಅನುಮತಿ ಪಡೆಯಲು ಅವಕಾಶವಿದ್ದು, ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದವರಿಗೆ ನಿಯಮಾನುಸಾರ ಅನುಮತಿ ದೊರೆತಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸಲು ವಿಫಲರಾದ ಕೆಲವರು ಇದೀಗ ವಿನಾಕಾರಣ ಆರೋಪ ಮಾಡುತ್ತಿದ್ದು, ಇದರಿಂದ ಪ್ರವಾಸೋದ್ಯಮದ ಬೆಳವಣಿಗೆಗೆ ಹಿನ್ನಡೆಯಾಗುವ ಆತಂಕವಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ಬೋಟ್ ಮಾಲೀಕರಿಗೆ ಪ್ರವಾಸಿಗರ ಸುರಕ್ಷತೆಯೇ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕರಿಸುವ ಬದಲು ರಾಜಕೀಯ ಹಸ್ತಕ್ಷೇಪದ ಮೂಲಕ ಗೊಂದಲ ಸೃಷ್ಟಿಸಬಾರದು. ಕಾನೂನುಬದ್ಧವಾಗಿ ಬೋಟಿಂಗ್ ನಡೆಸುತ್ತಿರುವವರ ವಿರುದ್ಧ ಆಧಾರರಹಿತ ಆರೋಪ ಹಾಗೂ ಅಪಪ್ರಚಾರ ನಿಲ್ಲಿಸಬೇಕು ಎಂದು ಗೋಕರ್ಣ ಓಶಿಯನ್ ಎಡ್ವೆಂಚರ್‌ನ ದಿಲೀಪ್ ನಾಯ್ಕ, ಸನ್‌ಶೈನ್ ಎಡ್ವೆಂಚರ್‌ನ ಮಹೇಶ ಮುಡಂಗಿ, ಗೋಲ್ಡನ್ ಫಾಕ್ಸ್‌ನ ಸಂದೀಪ್ ಮುದುಗೇಕರ್, ಅಮೇಜಿಂಗ್ ಗ್ರೇಸ್‌ನ ಗಣೇಶ ಮುಡಂಗಿ, ನ್ಯೂ ಸೀ ಲೈನ್‌ನ ಪ್ರಶಾಂತ ಜಟ್ಟಿ ಹರಿಕಂತ್ರ, ಮಾನ್ಸ್ಟರ್ ವಾಟರ್ ಸ್ಪೋರ್ಟ್ಸ್‌ನ ರಾಜೇಶ್ ಹೊಸ್ಕಟ್ಟ, ಪೊಸಿಡನ್‌ನ ಉಮಾಕಾಂತ ಮುಡಂಗಿ, ರಾಯಲ್ ಕ್ರೂಸ್‌ನ ಸತೀಶ್ ಪಿರಿನಕರ್, ಎವರ್ ಗ್ರೀನ್ ಎಡ್ವೆಂಚರ್‌ನ ಆನಂದು ಹರಿಕಾಂತ ಹಾಗೂ ಫಿನಿಕ್ಸ್‌ನ ನಿತ್ಯಾನಂದ ಹರಿಕಾಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

Please Share: