ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಬೆಳಗಾವಿಯಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಾರವಾರದ ಹಣ್ಬರ ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್‌ಗಳು ಅದ್ಭುತ ಪ್ರದರ್ಶನ ನೀಡಿ ಪದಕಗಳ ಬೇಟೆಯಾಡಿದ್ದಾರೆ.

Banner Ad

ಸೆ.12 ಮತ್ತು 13ರಂದು ನಡೆದ 1ನೇ ನಾರ್ತ್ ಕರ್ನಾಟಕ ಸ್ಪೀಡ್ ಆರ್‌ಎಸ್‌ಎಫ್‌ಐ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕ್ಲಬ್‌ನ ಐವರು ಸ್ಕೇಟರ್‌ಗಳು 3 ಚಿನ್ನ, 3 ಬೆಳ್ಳಿ ಹಾಗೂ 4 ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದು ಕಾರವಾರದ ಕ್ರೀಡಾ ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ.

ದಿಯಾನ್ ಎರಡು ಚಿನ್ನದ ಪದಕಗಳನ್ನು ಗೆದ್ದು ಗಮನ ಸೆಳೆದರೆ, ಆಯುಷ್ ಎ. ನಾಯಕ್ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಪಡೆದಿದ್ದಾರೆ. ಸ್ವರಾ ಪಿ. ಪಾವಸ್ಕರ್ ಒಂದು ಬೆಳ್ಳಿ ಹಾಗೂ ಒಂದು ಕಂಚು, ಫೈಝಲ್ ಗೋರಿ ಒಂದು ಬೆಳ್ಳಿ ಹಾಗೂ ಒಂದು ಕಂಚು ಮತ್ತು ವಿಹಾನ್ ವಿ. ಮಾಲ್ಸೇಕರ್ ಎರಡು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕ್ರೀಡಾಪಟುಗಳ ಈ ಗಮನಾರ್ಹ ಸಾಧನೆಗೆ ಅವರ ನಿರಂತರ ಪರಿಶ್ರಮ, ಶಿಸ್ತು ಮತ್ತು ಸಮರ್ಪಣೆ ಕಾರಣವಾಗಿದೆ. ಸ್ಕೇಟರ್‌ಗಳಿಗೆ ನಿರಂತರ ತರಬೇತಿ ನೀಡಿದ ಕೋಚ್ ಸಚಿನ್ ದೇಸಾಯಿ ಅವರಿಗೂ ಅಭಿನಂದನೆ ಸಲ್ಲಿಸಲಾಗಿದೆ.

ಕಾರವಾರದಲ್ಲಿ ಸ್ಕೇಟಿಂಗ್ ಕ್ರೀಡೆಗೆ ಉತ್ತಮ ವೇದಿಕೆ ಕಲ್ಪಿಸಿ, ಮೊದಲ ಬಾರಿಗೆ ಸ್ಕೇಟಿಂಗ್ ರಿಂಕ್ ಸ್ಥಾಪಿಸಿ, ಪ್ರತಿಭೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ಮುಖ್ಯ ಕೋಚ್ ದಿಲೀಪ್ ಹಾನ್ಬರ್ ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕೂ ಕ್ಲಬ್ ಕೃತಜ್ಞತೆ ಸಲ್ಲಿಸಿದೆ. ಈ ಮೂಲಕ ಕಾರವಾರದ ಸ್ಕೇಟಿಂಗ್ ಪ್ರತಿಭೆಗಳು ರಾಜ್ಯಮಟ್ಟದ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Please Share: