ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ವೇಳೆ ಕಲ್ಲು ತೂರಾಟದ ಆರೋಪ ಕೇಳಿಬಂದಿದ್ದು, ಭಟ್ಕಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಿ ಕಿಟಕಿ ಗಾಜು ಹಾನಿಗೊಳಿಸಲಾಗಿದೆ ಎಂಬ ದೂರು ದಾಖಲಾಗಿರುವ ಬೆನ್ನಲ್ಲೇ, ಗಣೇಶ ವಿಗ್ರಹದತ್ತಲೂ ಕಲ್ಲು ತೂರಲಾಗಿದೆ ಎಂದು ಗಣೇಶೋತ್ಸವ ಸಮಿತಿ ಪ್ರತಿದೂರು ನೀಡಿದೆ. ಎರಡೂ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Banner Ad

ಸೆ.16ರ ಬುಧವಾರ ರಾತ್ರಿ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ವಿಗ್ರಹವನ್ನು ವಿಸರ್ಜನೆಗೆ ಕೊಂಡೊಯ್ಯಲು ಮೆರವಣಿಗೆ ಆರಂಭವಾಗಿತ್ತು. ರಾತ್ರಿ ಸುಮಾರು 8.20ಕ್ಕೆ ತಲಾಂದದಿಂದ ಹೊರಟ ಮೆರವಣಿಗೆ ಗುಳಮಿ ರೈಲ್ವೆ ಬ್ರಿಡ್ಜ್ ದಾಟಿ ರೈಲ್ವೆ ನಿಲ್ದಾಣ ರಸ್ತೆಯತ್ತ ಸಾಗಿತ್ತು.

ಮೊದಲ ದೂರು: ಮೆರವಣಿಗೆ ರಾತ್ರಿ ಸುಮಾರು 9.45ರ ವೇಳೆಗೆ ರೈಲ್ವೆ ನಿಲ್ದಾಣ ರಸ್ತೆಯ ಮೂಲಕ ಸಾಗುತ್ತಿದ್ದಾಗ ರಸ್ತೆಯ ಪಕ್ಕದ ಪ್ರಥಮ ಮಹಡಿಯಲ್ಲಿರುವ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ನೆಲಮಹಡಿಯಲ್ಲಿರುವ ತಾಜುಸುನ್ನಾ ಅರೇಬಿಕ್ ಮದರಸಾ ಮೇಲೆ ಕಲ್ಲುಗಳನ್ನು ತೂರಲಾಗಿದೆ ಎಂದು ಬಂದರ ರಸ್ತೆ 5ನೇ ಕ್ರಾಸ್ ನಿವಾಸಿ ಅಬ್ದುಲ್ ಅಲಿಂ (67) ಹಾಗೂ ಶಾಹುಲ್ ಅಮೀನ್ ಗವಾಯಿ ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಲ್ಲು ತೂರಾಟದಿಂದ ಮಸೀದಿ ಹಾಗೂ ಮದರಸಾದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ದೂರಿನ ಆಧಾರದಲ್ಲಿ ಮಧ್ಯರಾತ್ರಿ 12.15ರ ಸುಮಾರಿಗೆ ಪ್ರಕರಣ ದಾಖಲಾಗಿದೆ. ಬಳಿಕ ಮುಸ್ಲಿಂ ಸಮುದಾಯದ ನೂರಾರು ಮಂದಿ ಪೊಲೀಸ್ ಠಾಣೆ ಎದುರು ಜಮಾಯಿಸಿ, ಕಲ್ಲು ತೂರಾಟ ನಡೆಸಿದವರನ್ನು ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಿಸಿದರು.

ಇದಕ್ಕೆ ಪ್ರತಿಯಾಗಿ ದೂರು: ಇದೇ ಘಟನೆಗೆ ಸಂಬಂಧಿಸಿದಂತೆ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜು ಸಂಕಪ್ಪ ನಾಯ್ಕ ಅವರು ಗುರುವಾರ ನಸುಕಿನ ಜಾವ ಸುಮಾರು 4 ಗಂಟೆಗೆ ಪ್ರತಿದೂರು ನೀಡಿದ್ದಾರೆ. ಮೆರವಣಿಗೆ ಗುಳಮಿ ರೈಲ್ವೆ ಬ್ರಿಡ್ಜ್ ದಾಟಿ ಮದರಸಾ ಹಾಗೂ ರೈಲ್ವೆ ನಿಲ್ದಾಣ ರಸ್ತೆಯತ್ತ ಸಾಗುತ್ತಿದ್ದ ವೇಳೆ ರಾತ್ರಿ ಸುಮಾರು 9.30ಕ್ಕೆ ರಾಮಚಂದ್ರ ನಾಯ್ಕ ಅವರಿಗೆ ಸೇರಿದ ಕಟ್ಟಡದ ಮೇಲಿನಿಂದ ಕಿಡಿಗೇಡಿಗಳು ಗಣೇಶ ವಿಗ್ರಹದತ್ತ ಕಲ್ಲುಗಳನ್ನು ತೂರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಲ್ಲು ತೂರಾಟದಿಂದ ಮೆರವಣಿಗೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಪ್ರತಿದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ಠಾಣೆಗೆ ಕರೆಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ, ಎಎಸ್ಪಿ ರಾನು ಗುಪ್ತ, ಸಿಪಿಐ ದಿವಾಕರ ಪಿ.ಎಂ. ಹಾಗೂ ಪಿಎಸ್‌ಐ ನವೀನ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಕಲ್ಲು ತೂರಾಟದ ನಿಖರ ಹಿನ್ನೆಲೆ ಹಾಗೂ ಘಟನೆಗೆ ಕಾರಣರಾದವರ ಗುರುತು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Please Share: