ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಗಣಪತಿ ವಿಸರ್ಜನೆಗೆ ವಿವಿಧ ನಿಯಮಗಳನ್ನು ಜಾರಿಗೊಳಿಸುವ ಆಡಳಿತ ವರ್ಗ, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಹಣಕೋಣ ಭಾಗದ ಸ್ಥಳೀಯರಿಂದ ಕೇಳಿಬಂದಿದೆ.

Banner Ad

ತಾಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಕೋಣದಿಂದ ಹಣಕೋಣಜೂಗ ಸಂಪರ್ಕಿಸುವ ಸೇತುವೆಯಲ್ಲಿ ಸೂಕ್ತ ಬೀದಿದೀಪ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಸಾರ್ವಜನಿಕರು ಹಾಗೂ ಗಣಪತಿ ವಿಸರ್ಜನೆಗೆ ತೆರಳುವವರು ಸಮಸ್ಯೆ ಎದುರಿಸುವಂತಾಗಿದೆ.

ಈ ಸೇತುವೆ ಬಳಿ ಪ್ರತಿವರ್ಷ 150ಕ್ಕೂ ಹೆಚ್ಚು ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯುತ್ತದೆ. ಪ್ರಸಕ್ತ ವರ್ಷವೂ ಮಂಗಳವಾರ ಎರಡನೇ ದಿನದ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಬಹುತೇಕ ಗಣಪತಿ ಮೂರ್ತಿಗಳನ್ನು ಇದೇ ಸೇತುವೆ ಬಳಿಯೇ ವಿಸರ್ಜಿಸಲಾಗುತ್ತಿದೆ. ಆದರೆ ಸೇತುವೆ ಮೇಲೆ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಸೇತುವೆ ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ್ದರೂ, ಬೀದಿದೀಪ ವ್ಯವಸ್ಥೆ ಕಲ್ಪಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದ ಇಲಾಖೆ ಹಾಗೂ ಆಡಳಿತ ತುರ್ತು ಕ್ರಮ ಕೈಗೊಂಡು ಸೇತುವೆಯಲ್ಲಿ ಸೂಕ್ತ ಬೀದಿದೀಪ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

 

Please Share: