ಕರಾವಳಿ ವಾಯ್ಸ್ ನ್ಯೂಸ್
ಗೋಕರ್ಣ: ಹೊಳೆಯುವ ಪಾತ್ರೆಗಳ ಹಿಂದೆ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳದೆ, ತಾಮ್ರ, ಕಂಚು, ಹಿತ್ತಾಳೆ, ಗಾಜು ಸೇರಿದಂತೆ ಪಾರಂಪರಿಕ ಪಾತ್ರೆಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ರವಿವಾರ ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ನೀರಿನ ಪಾತ್ರೆಗಳ ಕುರಿತು ಪ್ರವಚನ ನೀಡಿದ ಅವರು, ಪಾತ್ರೆಗಳು ಕೇವಲ ನೀರು ಅಥವಾ ಆಹಾರ ಶೇಖರಿಸುವ ಸಾಧನವಲ್ಲ. ಪಾತ್ರೆಯ ಗುಣವೂ ಅದರಲ್ಲಿರುವ ನೀರಿನ ಗುಣದ ಮೇಲೆ ಪರಿಣಾಮ ಬೀರುತ್ತದೆ. ಚಿನ್ನ, ಬೆಳ್ಳಿ, ತಾಮ್ರ, ಕಂಚು ಹಾಗೂ ಹಿತ್ತಾಳೆ ಪಾತ್ರೆಗಳು ಗುಣವೃದ್ಧಿಗೆ ಕಾರಣವಾಗುತ್ತವೆ. ಗಾಜು ಗುಣಹಾನಿ ಮಾಡದಿದ್ದರೂ, ಸ್ಟೇನ್ಲೆಸ್ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಪಾತ್ರೆಗಳು ಸರ್ವಕಾಲಿಕ ಬಳಕೆಗೆ ಸೂಕ್ತವಲ್ಲ ಎಂದರು.

ಸ್ಟೇನ್ಲೆಸ್ ಸ್ಟೀಲ್ ಕುರಿತು ಶ್ರೀರಂಗ ಮಹಾಗುರುಗಳ ಪ್ರಯೋಗಾತ್ಮಕ ಸಂಶೋಧನೆಯಲ್ಲಿ ದೇಹದ ವಾತ, ಪಿತ್ತ, ಕಫದ ಮೇಲೆ ವ್ಯತಿರಿಕ್ತ ಪರಿಣಾಮಗಳಿರುವುದು ದಾಖಲಿಸಲಾಗಿದೆ ಎಂದು ತಿಳಿಸಿದ ಅವರು, ಆಧುನಿಕ ವಿಜ್ಞಾನದ ಅಭಿಪ್ರಾಯಗಳು ಕಾಲಕ್ಕೆ ತಕ್ಕಂತೆ ಬದಲಾಗಬಹುದು. ಆದರೆ ಆವರೆಗೆ ಅಮೂಲ್ಯವಾದ ದೇಹವನ್ನು ಹಾಳು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ಮಠದ ಪೂಜೆ ಹಾಗೂ ಪೀಠಾಧಿಪತಿಗಳ ಬಳಕೆಯಲ್ಲಿ ಹಲವು ವರ್ಷಗಳಿಂದ ಸ್ಟೀಲ್, ಪ್ಲಾಸ್ಟಿಕ್ ಮುಂತಾದವುಗಳನ್ನು ದೂರವಿಡಲಾಗಿದೆ. ಸಮಾಜವೂ ಹಂತಹಂತವಾಗಿ ಪಾರಂಪರಿಕ ಪಾತ್ರೆಗಳ ಬಳಕೆಯತ್ತ ಮರಳಬೇಕು. ಶ್ರೀಮಂತರು ಅನಗತ್ಯ ವಿಚಾರಗಳಿಗೆ ಹಣ ಖರ್ಚು ಮಾಡಿದರೂ ಪ್ಲಾಸ್ಟಿಕ್ ಲೋಟದಲ್ಲಿ ನೀರು ಕುಡಿಯುವ ಪರಿಸ್ಥಿತಿ ಇದೆ. ಸಾಮಾನ್ಯ ಜನರೂ ತಾಮ್ರ, ಕಂಚು, ಹಿತ್ತಾಳೆ ಹಾಗೂ ಗಾಜಿನ ಪಾತ್ರೆಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿರಸಿ ಶಾಸಕ ಭೀಮಣ್ಣ ಟಿ. ನಾಯ್ಕ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ಬೆಂಗಳೂರು ಉತ್ತರ ಮಂಡಲದ ಪರವಾಗಿ ಕೆ.ಎಂ. ದಿವಾಕರ್ ಕುಟುಂಬದವರು ಗುರುಭಿಕ್ಷಾಸೇವೆ ಸಲ್ಲಿಸಿದರು. ಗಣಪತಿ ಪುದುಕೊಳಿ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.


