ಕರಾವಳಿ ವಾಯ್ಸ್ ನ್ಯೂಸ್ 

ಯಲ್ಲಾಪುರ: ಗಣಪತಿ ವಿಸರ್ಜನೆಗೆ ಮೀಸಲಾಗಿರುವ ಯಲ್ಲಾಪುರದ ಜೋಡಿ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ರಕ್ಷಣಾ ತಂಡದವರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Banner Ad

ಕೆರೆಯಲ್ಲಿ ಪದೇಪದೇ ಮೊಸಳೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಈ ಹಿಂದೆ ಕಾರ್ಯಾಚರಣೆ ನಡೆಸಿದ್ದರೂ ಯಶಸ್ವಿಯಾಗಿರಲಿಲ್ಲ. ಇದೀಗ ಗಣಪತಿ ವಿಸರ್ಜನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸುವುದು ಅರಣ್ಯ ಇಲಾಖೆಗೆ ಸವಾಲಾಗಿದೆ.

ಕಾರವಾರದಿಂದ ಅಶೋಕ್ ನಾಯ್ಕ ನೇತೃತ್ವದ ಡೇರಿಂಗ್ ಟೀಮ್ ವನ್ಯಜೀವಿ ರಕ್ಷಣಾ ತಂಡವನ್ನು ಕರೆಸಲಾಗಿದ್ದು, ಕಳೆದ ಎರಡು ದಿನಗಳಿಂದ ಕೆರೆಯಲ್ಲಿ ಮೊಸಳೆಗಾಗಿ ಶೋಧ ನಡೆಸಲಾಗುತ್ತಿದೆ. ಆದರೆ ಮೊಸಳೆ ಕಾರ್ಯಾಚರಣೆ ತಂಡದ ಕಣ್ಣಿಗೆ ಕಾಣಿಸಿಕೊಂಡು ಮತ್ತೆ ಮರೆಯಾಗುತ್ತಿದ್ದು, ಹಿಡಿಯಲು ಸಾಧ್ಯವಾಗಿಲ್ಲ.

ಗಣಪತಿ ವಿಸರ್ಜನೆ ವೇಳೆ ಮೊಸಳೆ ವಿಸರ್ಜನಾ ಸ್ಥಳದತ್ತ ಬಾರದಂತೆ ಕೆರೆಯ ಮಧ್ಯಭಾಗದಲ್ಲಿ ಬಲೆ ಅಳವಡಿಸಲಾಗಿದೆ. ಮೊಸಳೆಯನ್ನು ಪತ್ತೆಹಚ್ಚಿ ಸೆರೆಹಿಡಿಯುವ ಕಾರ್ಯಾಚರಣೆಯೂ ಮುಂದುವರಿದಿದೆ.

ಗಣಪತಿ ವಿಸರ್ಜನೆಗೆ ಆಗಮಿಸುವ ಸಾರ್ವಜನಿಕರು ಕೆರೆಯಲ್ಲಿ ಅಳವಡಿಸಿರುವ ಬಲೆಯನ್ನು ದಾಟದಂತೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

 

 

Please Share: