ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಸ್ವೇಲ್ ಸರ್ಜ್ (Swell Surge) ಅಸಹಜ ಸಮುದ್ರ ಅಲೆಗಳ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮತ್ತೊಂದು ಎಚ್ಚರಿಕೆ ನೀಡಲಾಗಿದೆ. ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ (INCOIS) ಮುನ್ಸೂಚನೆಯಂತೆ, ಮಾಜಾಳಿ–ಭಟ್ಕಳ ನಡುವಿನ ಕರಾವಳಿಯಲ್ಲಿ ಸೆ.12ರ ಸಂಜೆ 5.30ರಿಂದ ಸೆ.13ರ ರಾತ್ರಿ 8.30ರವರೆಗೆ ಸ್ವೇಲ್ ಸರ್ಜ್ ಅಲೆಗಳ ಸಾಧ್ಯತೆ ಇದೆ.
ಈ ಅವಧಿಯಲ್ಲಿ 16ರಿಂದ 19 ಸೆಕೆಂಡ್ಗಳ ಅಲೆಗಳ ಅವಧಿಯೊಂದಿಗೆ 1ರಿಂದ 1.2 ಮೀಟರ್ ಎತ್ತರದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು, ದೋಣಿ ಚಲಾಯಿಸುವವರು ಹಾಗೂ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸ್ಥಳೀಯ ಆಡಳಿತದ ಸುರಕ್ಷತಾ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

ಏನಿದು ಸ್ವೇಲ್ ಸರ್ಜ್? ಸ್ಥಳೀಯ ಗಾಳಿಯಿಂದ ಉಂಟಾಗುವ ಸಾಮಾನ್ಯ ಅಲೆಗಳಿಗಿಂತ ಭಿನ್ನವಾಗಿ, ಸ್ವೇಲ್ ಅಲೆಗಳು ದೂರದ ಸಾಗರದಲ್ಲಿ ಸೃಷ್ಟಿಯಾಗುತ್ತವೆ. ಹಿಂದೂ ಮಹಾಸಾಗರದ ದಕ್ಷಿಣ ಭಾಗ ಅಥವಾ ಅಂಟಾರ್ಟಿಕಾ ಸಮೀಪ ಉಂಟಾಗುವ ತೀವ್ರ ಚಂಡಮಾರುತ ಹಾಗೂ ಬಲವಾದ ಗಾಳಿಯಿಂದ ಸಮುದ್ರಕ್ಕೆ ಅಪಾರ ಶಕ್ತಿ ವರ್ಗಾವಣೆಯಾಗುತ್ತದೆ.
ಈ ಶಕ್ತಿಯುತ ಅಲೆಗಳು ತಮ್ಮ ಮೂಲ ಪ್ರದೇಶದಿಂದ ಸಾವಿರಾರು ಕಿಲೋಮೀಟರ್ ದೂರದವರೆಗೆ ಪ್ರಯಾಣಿಸಿ ಕರಾವಳಿಗೆ ಅಪ್ಪಳಿಸಬಹುದು. ಹೀಗಾಗಿ ಸ್ಥಳೀಯವಾಗಿ ಚಂಡಮಾರುತದ ಯಾವುದೇ ಲಕ್ಷಣಗಳಿಲ್ಲದಿದ್ದರೂ ಏಕಾಏಕಿ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಕೇರಳ ಹಾಗೂ ದಕ್ಷಿಣ ಭಾರತದ ಕರಾವಳಿ ಭಾಗದಲ್ಲಿ ಇಂತಹ ವಿದ್ಯಮಾನವನ್ನು ‘ಕಲ್ಲಕ್ಕಡಲ್’ (Kallakkadal) ಎಂದು ಕರೆಯಲಾಗುತ್ತದೆ. ಮಲಯಾಳಂನಲ್ಲಿ ಇದರ ಅರ್ಥ ‘ಗಳ್ಳನಂತೆ ಬರುವ ಸಮುದ್ರ’ ಎಂದಾಗಿದೆ. ಮುನ್ಸೂಚನೆಯಿಲ್ಲದ ರೀತಿಯಲ್ಲಿ ಅಲೆಗಳು ಕರಾವಳಿಗೆ ಅಪ್ಪಳಿಸಿ ಸಮುದ್ರದ ನೀರು ತೀರದತ್ತ ನುಗ್ಗುವ ಕಾರಣ ಈ ಹೆಸರು ಬಳಕೆಯಲ್ಲಿದೆ.
ಆದ್ದರಿಂದ ಉತ್ತರ ಕನ್ನಡ ಕರಾವಳಿಯಲ್ಲಿ ಮೀನುಗಾರರು, ದೋಣಿ ಚಲಾಯಿಸುವವರು ಹಾಗೂ ಪ್ರವಾಸಿಗರು ಸೆ.13ರ ರಾತ್ರಿ 8.30ರವರೆಗೆ ವಿಶೇಷ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.


