ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸಾರ್ವಜನಿಕ ಕುಂದುಕೊರತೆಗಳ ಕುರಿತು ಜನಪ್ರತಿನಿಧಿಗಳು ನೌಕಾನೆಲೆ ಅಧಿಕಾರಿಗಳೊಂದಿಗೆ ವಿಚಾರಿಸುವಾಗ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು ಎಂದು ಕಾರವಾರ–ಅಂಕೋಲಾ ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.
ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿರುವ ಯೋಜನಾ ನಿರಾಶ್ರಿತ ಗುತ್ತಿಗೆ ಕಾರ್ಮಿಕರೊಬ್ಬರ ಗೇಟ್‌ಪಾಸ್‌ಗೆ ಸಂಬಂಧಿಸಿದ ಪೊಲೀಸ್ ಪರಿಶೀಲನೆ ಕುರಿತು ಸಂಬಂಧಿತ ಅಧಿಕಾರಿಯೊಂದಿಗೆ ಮೊಬೈಲ್ ಮೂಲಕ ವಿಚಾರಿಸಿದ ಸಂದರ್ಭದಲ್ಲಿ ತಮಗಾದ ಕೆಟ್ಟ ಅನುಭವದ ಹಿನ್ನೆಲೆಯಲ್ಲಿ ಸೈಲ್ ಈ ಹೇಳಿಕೆ ನೀಡಿದ್ದಾರೆ.
ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದು, ಜಿಲ್ಲಾಧಿಕಾರಿಗಳು ನೌಕಾನೆಲೆಯ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಕಮೋಡರ್ ವಿಕ್ರಾಂತ್ ಅವರು ಶಾಸಕರಿಗೆ ದೂರವಾಣಿ ಮೂಲಕ ಮಾತನಾಡಿ, ಕೆಳಹಂತದ ಅಧಿಕಾರಿಗಳಿಂದ ಯಾವುದೇ ಆವಾಂತರವಾಗಿದ್ದರೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸೈಲ್ ತಿಳಿಸಿದ್ದಾರೆ.
ಇದೇ ವೇಳೆ ಸೀಬರ್ಡ್ ನೌಕಾನೆಲೆ ಹಾಗೂ ಎನ್‌ಪಿಸಿಐಎಲ್ ಕೈಗಾ ಯೋಜನೆಗಳಲ್ಲಿ ಸ್ಥಳೀಯ ಯುವಕರು ಮತ್ತು ಉತ್ತರ ಭಾರತದಿಂದ ಬರುವ ಗುತ್ತಿಗೆ ಕಾರ್ಮಿಕರ ಪೊಲೀಸ್ ಪರಿಶೀಲನೆ ವಿಚಾರದಲ್ಲಿ ಇಬ್ಬಗೆಯ ನೀತಿ ಅನುಸರಿಸಲಾಗುತ್ತಿದೆ ಎಂಬ ಅಪಸ್ವರ ಕೇಳಿಬರುತ್ತಿದೆ ಎಂದು ಅವರು ಹೇಳಿದ್ದಾರೆ.
ಹೊರರಾಜ್ಯದಿಂದ ಬರುವ ಗುತ್ತಿಗೆ ಕಾರ್ಮಿಕರು ಯಾವ ಪ್ರದೇಶದಿಂದ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂಬುದೂ ಪ್ರಶ್ನೆಯಾಗಿದೆ. ಕೆಲ ಯೋಜನೆಗಳಲ್ಲಿ ಇಂತಹ ಕಾರ್ಮಿಕರಿಗೆ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಸಲ್ಲಿಸಲು ಗ್ರೇಸ್ ಪಿರಿಯಡ್ ನೀಡಲಾಗುತ್ತಿದೆ. ಆದರೆ ಸ್ಥಳೀಯರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ತಿಳಿಸಿದ್ದಾರೆ.
ಇದು ಸತ್ಯವಾಗಿದ್ದರೆ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಎಲ್ಲರಿಗೂ ಸಮಾನ ಮಾನದಂಡ ಅನುಸರಿಸುವ ಅಗತ್ಯವಿದೆ ಎಂದು ಸೈಲ್ ಹೇಳಿದ್ದಾರೆ.
ಸ್ಥಳೀಯರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂಬ ಕಾರಣಕ್ಕೆ ಮಾತ್ರ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ನಿರಾಕರಿಸಬಾರದು. ದ್ವೇಷಪೂರಿತ ದೂರಿನಿಂದ ಎಫ್‌ಐಆರ್ ದಾಖಲಾಗಿರಬಹುದು ಅಥವಾ ಪ್ರಕರಣದ ಗಂಭೀರತೆ ಕಡಿಮೆ ಇರಬಹುದು.
ಹೀಗಾಗಿ ಪ್ರಕರಣದ ಸ್ವರೂಪ ಮತ್ತು ಗಂಭೀರತೆಯನ್ನು ಪರಿಗಣಿಸಿ ಪೊಲೀಸ್ ಪರಿಶೀಲನೆ ನಡೆಸಬೇಕು. ಇಲ್ಲವಾದರೆ ಗುತ್ತಿಗೆ ಉದ್ಯೋಗ ಪಡೆಯುವ ಸ್ಥಳೀಯ ಯುವಕರ ಭವಿಷ್ಯಕ್ಕೆ ತೊಂದರೆಯಾಗಬಹುದು. ಈ ಕುರಿತು ಸಂಬಂಧಪಟ್ಟವರು ಮತ್ತೊಮ್ಮೆ ಚಿಂತಿಸುವ ಅಗತ್ಯವಿದೆ ಎಂದು ಶಾಸಕ ಸತೀಶ ಸೈಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


