ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕರಾವಳಿ ಉತ್ಸವ ಹಾಗೂ ಮದುವೆ ಸಮಾರಂಭಗಳಿಗೆ ಡಿಜೆ ಬಳಕೆಗೆ ಅವಕಾಶ ನೀಡುವ ಜಿಲ್ಲಾಡಳಿತ, ವರ್ಷಕ್ಕೊಮ್ಮೆ ನಡೆಯುವ ಗಣೇಶೋತ್ಸವದ ವಿಸರ್ಜನೆ ಮೆರವಣಿಗೆಗೆ ಮಾತ್ರ ಡಿಜೆ ನಿರ್ಬಂಧ ಹೇರುತ್ತಿರುವುದಕ್ಕೆ ಸಾರ್ವಜನಿಕ ಗಣಪತಿ ಉತ್ಸವ ಆಯೋಜಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗಣೇಶೋತ್ಸವ ಶಾಂತಿಪಾಲನಾ ಸಭೆಯಲ್ಲಿ ಡಿಜೆ ವಿಚಾರವಾಗಿ ಆಯೋಜಕರು ಅಧಿಕಾರಿಗಳ ಮುಂದೆ ಆಕ್ಷೇಪ ವ್ಯಕ್ತಪಡಿಸಿದರು.
ಟೋಲ್ ನಾಕಾ ಗಣೇಶೋತ್ಸವ ಆಯೋಜಕ ಆನಂದು ರಾಮಾ ನಾಯ್ಕ ಮಾತನಾಡಿ, ಗಣೇಶೋತ್ಸವದ ವಿಸರ್ಜನೆ ಮೆರವಣಿಗೆ ನಡೆಯುವ ಒಂದು ದಿನಕ್ಕೆ ಮಾತ್ರ ನಿಗದಿತ ಸಮಯದಲ್ಲಿ ಡಿಜೆ ಬಳಕೆಗೆ ಅವಕಾಶ ನೀಡಬೇಕು. ಇತರೆ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಹೇಳಿದರು.
ಡಿಜೆ ನಿರ್ವಾಹಕರು ಸುಮಾರು ₹25ರಿಂದ ₹30 ಲಕ್ಷ ಹೂಡಿಕೆ ಮಾಡಿ ಸೌಂಡ್ ಸಿಸ್ಟಂ ಅಳವಡಿಸಿಕೊಂಡಿದ್ದು, ಹಲವರು ಇದೇ ವೃತ್ತಿಯನ್ನು ಅವಲಂಬಿಸಿದ್ದಾರೆ. ಡಿಜೆ ಬಳಕೆಯಿಂದ ಸಮಸ್ಯೆ ಇದ್ದರೆ ಎಲ್ಲ ಕಾರ್ಯಕ್ರಮಗಳಿಗೂ ಒಂದೇ ನಿಯಮ ಅನ್ವಯಿಸಬೇಕು. ಇಲ್ಲವಾದರೆ ನಿಗದಿತ ಸಮಯ ಹಾಗೂ ಧ್ವನಿ ಮಿತಿಯೊಳಗೆ ಗಣೇಶೋತ್ಸವಕ್ಕೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
“ಡಿಜೆ ಬಳಕೆಗೆ ನಿರ್ಬಂಧವೇ ಪರಿಹಾರ ಎಂದಾದರೆ ಡಿಜೆ ತಯಾರಿಸುವ ಕಂಪನಿಗಳನ್ನೇ ನಿಷೇಧಿಸಲಿ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ ಅವರು, ಡಿಜೆ ವೃತ್ತಿಯನ್ನೇ ನಂಬಿಕೊಂಡಿರುವವರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಣೇಶೋತ್ಸವದ ವಿಸರ್ಜನೆ ಮೆರವಣಿಗೆಗೆ ಒಂದು ದಿನ ಮಾತ್ರ ಅವಕಾಶ ಕೇಳಲಾಗುತ್ತಿದ್ದು, ನಿಗದಿತ ಸಮಯ ಮತ್ತು ನಿಯಮಗಳೊಂದಿಗೆ ಡಿಜೆ ಬಳಕೆಗೆ ಅವಕಾಶ ನೀಡುವಂತೆ ಆಯೋಜಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.


