ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಪುಟ್ಟ ಪುಟ್ಟ ಹೆಜ್ಜೆಗಳು, ಕೃಷ್ಣನ ವೇಷಭೂಷಣ, ಮುಖದಲ್ಲಿ ಮುಗ್ಧ ನಗು… ಅಜ್ವಿ ಓಷನ್‌ನ ವೇದಿಕೆ ಕೆಲಕಾಲ ಪುಟ್ಟ ಕೃಷ್ಣರ ಲೋಕವಾಗಿ ಕಂಗೊಳಿಸಿತು. ಕಲ್ಪನಾ ರಶ್ಮಿ ಕಲಾಲೋಕ, ಮಹಾಲಕ್ಷ್ಮಿ ಎಲೆಕ್ಟ್ರಾನಿಕ್ಸ್ ಹಾಗೂ ಕಾಮತ್ ಹೊಂಡ ಸಹಯೋಗದಲ್ಲಿ ಶ್ರೀಕೃಷ್ಣನ ಚದ್ಮವೇಷ ಸ್ಪರ್ಧೆ ನಡೆಯಿತು.

Banner Ad

ಐದು ವರ್ಷದೊಳಗಿನವರು, 5ರಿಂದ 10 ವರ್ಷದೊಳಗಿನವರು ಹಾಗೂ 10ರಿಂದ 16 ವರ್ಷದೊಳಗಿನ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಪುಟ್ಟ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಲಾಯಿತು.

ಐದು ವರ್ಷದೊಳಗಿನವರ ವಿಭಾಗದಲ್ಲಿ ಸಾತ್ವಿಕ್ ಹರಿಕಂತ್ರ ಪ್ರಥಮ, ಸಮನ್ವಿ ವಾಲ್ಮೀಕಿ ದ್ವಿತೀಯ ಹಾಗೂ ನಮಸ್ವಿ ನಾಯ್ಕ ತೃತೀಯ ಸ್ಥಾನ ಪಡೆದರು. ಸಿರ್ನಿಕ ಜಾವ್ಕರ್ ಹಾಗೂ ಸಾಹಿತ್ಯ ಶೆಟ್ಟಿ ಸಮಾಧಾನಕರ ಬಹುಮಾನ ಪಡೆದರು.

5ರಿಂದ 10 ವರ್ಷದೊಳಗಿನವರ ವಿಭಾಗದಲ್ಲಿ ವಿಸ್ಮಯ ನಾಯ್ಕ ಪ್ರಥಮ, ರಿತೀಶ ನಾಯ್ಕ ದ್ವಿತೀಯ ಹಾಗೂ ಸ್ತುತಿ ಕೆ. ಗುನಗಿ ತೃತೀಯ ಸ್ಥಾನ ಪಡೆದರು. ನೀತ ಹರಿಕಂತ್ರ ಹಾಗೂ ಕಾರುಣ್ಯ ಕೆ. ನಾಯ್ಕ ಸಮಾಧಾನಕರ ಬಹುಮಾನಕ್ಕೆ ಪಾತ್ರರಾದರು.

10ರಿಂದ 16 ವರ್ಷದೊಳಗಿನವರ ವಿಭಾಗದಲ್ಲಿ ರಿಷಿಕಾ ನಾಯ್ಕ ಪ್ರಥಮ, ಧನ್ವಿ ರಾಯಕರ್ ದ್ವಿತೀಯ ಹಾಗೂ ಸೃಷ್ಟಿ ಹರಿಕಂತ್ರ ತೃತೀಯ ಸ್ಥಾನ ಪಡೆದರು. ಸಿಯಾ ಪೆಡ್ನೆಕರ್ ಸಮಾಧಾನಕರ ಬಹುಮಾನ ಪಡೆದರು.

ಅಜ್ವಿ ಓಷನ್ ಮಾಲೀಕ ರಾಜೇಶ್ ಕಾಮತ್, ಮಹಾಲಕ್ಷ್ಮಿ ಎಲೆಕ್ಟ್ರಾನಿಕ್ಸ್ ಮಾಲೀಕರಾದ ನಿರ್ಮಲ ಕಾಮತ್, ಸಾಹಿತಿ ಪ್ರೇಮ ಟಿ.ಎಂ., ಹಿಂದೂ ಹೈಸ್ಕೂಲ್ ಶಿಕ್ಷಕ ಸಂತೋಷ್ ಶೇಟ್, ಸಂಕೇತ್ ಕುಲಕರ್ಣಿ ಹಾಗೂ ಪೂರ್ಣಿಮಾ ಬಶೆಟ್ಟಿ ಕಾಜಲ್ ಉಪಸ್ಥಿತರಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಬಿ.ಎನ್. ಸೂರ್ಯಪ್ರಕಾಶ್ ನಿರೂಪಿಸಿದರು.

ಕಲ್ಪನಾ ರಶ್ಮಿ ಕಲಾಲೋಕದ ನೃತ್ಯ ಶಿಕ್ಷಕರಾದ ಶ್ರದ್ಧಾ ಕಾಂಬಳೆ, ಹರ್ಷಿತ ಭೋವಿ, ಶ್ರದ್ಧಾ ಬಾಂಧೇಕರ್, ಸರ್ವಶ್ರೀ ಪರಾಷ್ಠಿಕರ್, ಅಕ್ಷರ ಕೋಠಾರ್ಕರ್ ಹಾಗೂ ಅಮೃತ ನಾಯ್ಕ ಕಾರ್ಯಕ್ರಮಕ್ಕೆ ಸಹಕರಿಸಿದರು. ನಿರ್ಮಲ ಕಾಮತ್ ಅವರು ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಿದರು.

 

 

 

Please Share: