ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ನಕಲಿ ವ್ಯಕ್ತಿಗಳು, ನಕಲಿ ಸಹಿ ಹಾಗೂ ಸುಳ್ಳು ದಾಖಲೆಗಳನ್ನು ಬಳಸಿ ಜಮೀನು ಮಾಲಕರಂತೆ ಬಿಂಬಿಸಿಕೊಂಡು ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Banner Ad

ಬೊಗ್ರಿಬೈಲ್ ಗ್ರಾಮದ ಸರ್ವೆ ನಂ.79/ಅ4ರ 1 ಎಕರೆ 14 ಗುಂಟೆ ಜಮೀನು ಪಿರ್ಯಾದಿದಾರರು ಹಾಗೂ ಅವರ ಸಹೋದರರಿಗೆ ಸೇರಿದ್ದಾಗಿದೆ. ಆರೋಪಿಗಳು ಅಂಕೋಲಾ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪಿರ್ಯಾದಿದಾರರು ಹಾಗೂ ಅವರ ಸಹೋದರರೇ ಎಂಬಂತೆ ನಕಲಿ ವ್ಯಕ್ತಿಗಳನ್ನು ಹಾಜರುಪಡಿಸಿ, ಸುಳ್ಳು ಸಹಿ ಮತ್ತು ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಮಾರಾಟ ಮಾಡಿ ವಂಚಿಸಿರುವ ಆರೋಪ ಕೇಳಿಬಂದಿತ್ತು.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.171/2026ರಂತೆ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಕಾರವಾರ ಉಪವಿಭಾಗದ ಡಿವೈಎಸ್‌ಪಿ ಎಸ್.ವಿ. ಗಿರೀಶ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ತಂದೆ ಆನಂದು ಗೌಡ (ಬಾಳೆಗುಳಿ) ಹಾಗೂ ಕೃತ್ಯಕ್ಕೆ ಸಹಕರಿಸಿದ ಶಂಕರ ತಂದೆ ರಾಮದಾಸ ಅಣ್ವೇಕರ (ಉಪನೋಂದಣಾಧಿಕಾರಿ ಕಚೇರಿಯ ಡಾಟಾ ಎಂಟ್ರಿ ಆಪರೇಟರ್), ಚೆನ್ನಪ್ಪ @ ರವಿ ತಂದೆ ಜಟ್ಟಿ ನಾಯ್ಕ (ಕೃಷ್ಣಾಪುರ, ಬಾಳೆಗುಳಿ), ದರ್ಶನ ತಂದೆ ನಾರಾಯಣ ಗೌಡ (ಬೆಳಸೆ) ಮತ್ತು ಯಂಕು ತಂದೆ ಹುಲಿಯಾ ಗೌಡ (ಬೆಳಸೆ) ಅವರನ್ನು ಬಂಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನದ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಸ್.ವಿ. ಗಿರೀಶ್ ನೇತೃತ್ವದಲ್ಲಿ ಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐಗಳಾದ ಗುರುನಾಥ ಹಾದಿಮನಿ, ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ.

ಪ್ರಕರಣವನ್ನು ಪತ್ತೆಹಚ್ಚಿದ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ.

 

 

Please Share: