ಕರಾವಳಿ ವಾಯ್ಸ್ ನ್ಯೂಸ್ 

ಜೋಯಿಡಾ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ಹಾಗೂ ಅದರ ಮರಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಬಾಮಣಗಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

Banner Ad

ಬಾಮಣಗಿ ಗ್ರಾಮದ ನಿವಾಸಿ ದಾವಲ್ ಸಾಬ್ ಗೂಡು ಸಾಬ್ ದೊಡ್ಡಮನಿ (50) ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕರಡಿ ಹಾಗೂ ಅದರ ಮರಿ ದಾಳಿ ನಡೆಸಿವೆ ಎನ್ನಲಾಗಿದೆ.

ದಾಳಿಯಲ್ಲಿ ದಾವಲ್ ಸಾಬ್ ಅವರ ಎರಡೂ ಕೈಗಳು ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಕರಡಿಯೊಂದಿಗೆ ಹೋರಾಡಿ ಅದರ ದಾಳಿಯಿಂದ ತಪ್ಪಿಸಿಕೊಂಡ ಅವರು ಹೇಗೋ ಮನೆಗೆ ತಲುಪಿದ್ದಾರೆ.

ತಕ್ಷಣ ಕುಟುಂಬಸ್ಥರು ಅವರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.

ಬಾಮಣಗಿ ಗ್ರಾಮದ ಸುತ್ತಮುತ್ತ ಕರಡಿ ಹಾಗೂ ಅದರ ಮರಿ ಓಡಾಡುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೊಲಗಳಿಗೆ ತೆರಳುವ ರೈತರು ಹಾಗೂ ಗ್ರಾಮಸ್ಥರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕರಡಿ ಸಂಚಾರದ ಬಗ್ಗೆ ನಿಗಾ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

Please Share: