ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ತಾಲೂಕಿನ ಐಪಿಎಂ ಪ್ರದೇಶದಲ್ಲಿ ಚಿರತೆಯೊಂದು ರಾತ್ರಿ ವೇಳೆ ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
ಶನಿವಾರ ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಗೆ ಐಪಿಎಂನ ದಾಂಡೇಲಿ ಜಂಗಲ್ ರೆಸಿಡೆನ್ಸಿ ಹಾಗೂ ಸಮೀಪದ ವೈಲ್ಡ್ ಟೈಗರ್ ಕ್ಯಾಂಪ್ ಹೋಂಸ್ಟೇ ಆವರಣದಲ್ಲಿ ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯಲ್ಲ. ಕೆಲ ದಿನಗಳ ಹಿಂದೆಯೂ ಇದೇ ಪ್ರದೇಶದಲ್ಲಿ ಚಿರತೆಯೊಂದು ರಸ್ತೆ ದಾಟುತ್ತಿದ್ದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಮತ್ತೆ ಹೋಂಸ್ಟೇ ಆವರಣದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಸ್ಥಳೀಯರ ಪ್ರಕಾರ, ಕಳೆದ ಒಂದು–ಎರಡು ವರ್ಷಗಳಿಂದ ಐಪಿಎಂ ಸುತ್ತಮುತ್ತ ರಾತ್ರಿ ವೇಳೆ ಚಿರತೆಗಳ ಓಡಾಟ ಆಗಾಗ್ಗೆ ಕಂಡುಬರುತ್ತಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳಿರುವುದರಿಂದ ಅವು ಚಿರತೆಗಳ ಸಂಚಾರಕ್ಕೆ ಕಾರಣವಾಗಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಚಿರತೆಯ ನಿರಂತರ ಓಡಾಟದಿಂದಾಗಿ ರಾತ್ರಿ ವೇಳೆ ರಸ್ತೆಗಳಲ್ಲಿ ಸಂಚರಿಸುವ ಸ್ಥಳೀಯರು ಹಾಗೂ ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆ ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಜನರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


