ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರಕ್ಕೆ ಬಿದ್ದು ಮೀನುಗಾರನೊಬ್ಬ ಮೃತಪಟ್ಟಿರುವ ಘಟನೆ ಕಾರವಾರ ಬೈತಖೋಲ್ ಲೈಟ್‌ಹೌಸ್ ಸಮೀಪ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

Banner Ad

ಮೃತರನ್ನು ಕುಮಟಾ ತಾಲೂಕಿನ ಸಸಿಹಿತ್ಲು ಗ್ರಾಮದ ವೆಂಕಟೇಶ ವೆಂಕಪ್ಪ ಹರಿಕಂತ್ರ (32) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಮೀನುಗಾರರಾಗಿದ್ದರು.

ಆ.29ರಂದು ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ವೆಂಕಟೇಶ ಅವರು ಬೋಟ್‌ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಮೀನು ಬಲೆ ಎಳೆಯುವ ಸಂದರ್ಭದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿಯೋ ಅಥವಾ ಕಾಲು ಜಾರಿಯೋ ಸಮುದ್ರಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಬೋಟ್‌ನಲ್ಲಿದ್ದವರು ಮೃತದೇಹವನ್ನು ಕಾರವಾರ ಬೈತಖೋಲ್ ಧಕ್ಕೆಗೆ ತಂದು ಬಳಿಕ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣದ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಮೃತರ ಸಹೋದರ ರತ್ನಾಕರ ವೆಂಕಪ್ಪ ಹರಿಕಂತ್ರ (46) ಅವರು ಕಾರವಾರ ಶಹರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

Please Share: