ಕರಾವಳಿ ವಾಯ್ಸ್ ನ್ಯೂಸ್ 

ಹಳಿಯಾಳ: ಪಾಸ್‌ ಅಥವಾ ಪರವಾನಗಿ ಇಲ್ಲದೆ ಸ್ಕೂಟರ್‌ನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಂಡೇಲಿ ತಾಲೂಕಿನ ಹಳೇ ದಾಂಡೇಲಿ ನಿವಾಸಿ ಬಾಬಸಾಬ್ ಬೇಪಾರಿ ಎಂಬಾತ ಅಳ್ನಾವರ ಕಡೆಯಿಂದ ದಾಂಡೇಲಿ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ವಾಹನ ತಡೆದು ತಪಾಸಣೆ ನಡೆಸಿದ್ದಾರೆ. ಹಳಿಯಾಳ-ಯಲ್ಲಾಪುರ ರಸ್ತೆಯ ಆರ್‌ವಿಡಿ ಕಾಲೇಜು ಸಮೀಪ ವಾಹನ ಪರಿಶೀಲಿಸಿದಾಗ ಚೀಲವೊಂದರಲ್ಲಿ ಮಾಂಸ ಪತ್ತೆಯಾಗಿದೆ.

ಪೊಲೀಸರ ತಪಾಸಣೆಯಲ್ಲಿ ಬಿಳಿ ಬಣ್ಣದ ಗೊಬ್ಬರದ ಚೀಲದಲ್ಲಿ ಸುಮಾರು 54 ಕೆಜಿ ದನದ ಮಾಂಸ ಸಾಗಿಸುತ್ತಿರುವುದು ಪತ್ತೆಯಾಗಿದೆ. ಪತ್ತೆಯಾದ ಮಾಂಸದ ಅಂದಾಜು ಮೌಲ್ಯ ₹5 ಸಾವಿರ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಂಸ ಸಾಗಾಟಕ್ಕೆ ಸಂಬಂಧಿಸಿದಂತೆ ಯಾವುದೇ ಪಾಸ್‌ ಅಥವಾ ಪರವಾನಗಿ ಹೊಂದಿರದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾಗಾಟಕ್ಕೆ ಬಳಸಿದ್ದ ಕೆಎ-65 ಹೆಚ್-7093 ನೋಂದಣಿ ಸಂಖ್ಯೆಯ ಸುಜುಕಿ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯು ಮಾಂಸವನ್ನು ಎಲ್ಲಿಂದ ಪಡೆದುಕೊಂಡಿದ್ದ ಹಾಗೂ ಎಲ್ಲಿಗೆ ಸಾಗಿಸುತ್ತಿದ್ದ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

 

Please Share: