ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ತಾಲೂಕಿನ ಶಿಡ್ಲಗುಂಡಿ ಸಮೀಪ ಬುಧವಾರ ಸಂಜೆ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಚಾಲಕರು ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಯಲ್ಲಾಪುರದತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಯಲ್ಲಾಪುರದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಮತ್ತೊಂದು ಸಾರಿಗೆ ಬಸ್ ಶಿಡ್ಲಗುಂಡಿ ಬಳಿ ಎದುರುಬದುರಾಗಿ ಡಿಕ್ಕಿಯಾಗಿವೆ. ಅಪಘಾತದ ತೀವ್ರತೆಗೆ ಎರಡೂ ಬಸ್‌ಗಳ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.
ಡಿಕ್ಕಿಯ ರಭಸಕ್ಕೆ ಯಲ್ಲಾಪುರ ಮಾರ್ಗದ ಬಸ್‌ನ ಚಾಲಕ ವಾಹನದೊಳಗೆ ಸಿಲುಕಿಕೊಂಡಿದ್ದರು. ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾದರೂ ಚಾಲಕನನ್ನು ಹೊರತೆಗೆಯಲು ಕಷ್ಟವಾಗಿದ್ದು, ಬಳಿಕ ಜೆಸಿಬಿ ನೆರವಿನಿಂದ ಅವರನ್ನು ಹೊರಕ್ಕೆ ಕರೆತರಲಾಯಿತು.

ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಗಾಯಾಳುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಘಟನೆಯಿಂದ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿ, ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಾಲು ಕಂಡುಬಂದಿತು. ಮಾಹಿತಿ ಪಡೆದ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದರು. ಅಪಘಾತಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.
