ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಬಡಗಣಿ ಹೊಳೆಯಲ್ಲಿ ನಡೆದಿದೆ.

Banner Ad

ಮೃತರನ್ನು ಹೊನ್ನಾವರ ತಾಲೂಕಿನ ಹಳದಿಪುರ ಸಮೀಪದ ಗಜನಿಗುಡಿ ಅಗ್ರಹಾರ ನಿವಾಸಿ ಜಟ್ಟಿ ನಾರಾಯಣ ಮುಕ್ರಿ (34) ಎಂದು ಗುರುತಿಸಲಾಗಿದೆ. ಮೀನು ಹಿಡಿಯುವ ಹವ್ಯಾಸ ಹೊಂದಿದ್ದ ಅವರು ರವಿವಾರ ರಾತ್ರಿ ಸುಮಾರಿಗೆ ಬಡಗಣಿ ಹೊಳೆಗೆ ತೆರಳಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು.

ಆದರೆ ಸೋಮವಾರ ಬೆಳಿಗ್ಗೆ ಸುಮಾರು 10.15ರ ವೇಳೆಗೆ ಅವರ ಶವ ಹೊಳೆಯಲ್ಲಿ ಪತ್ತೆಯಾಗಿದೆ. ಮೃತನ ಅಣ್ಣ ಮಂಜುನಾಥ ನಾರಾಯಣ ಮುಕ್ರಿ ಅವರು ಕುಮಟಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಜಟ್ಟಿಗೆ ಮದ್ಯಪಾನದ ಚಟವಿದ್ದು, ಮೀನು ಹಿಡಿಯುವಾಗ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಅಥವಾ ಮದ್ಯದ ಅಮಲಿನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಘಟನೆ ತಿಳಿದ ತಕ್ಷಣ ಮಂಜುನಾಥ ಅವರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

 

Please Share: