ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕಾರವಾರದ ಕ್ರೀಡಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಹಾಗೂ ಬೋಲ್ಡ್ ಅಂಡ್ ಡೈನಾಮಿಕ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ‘ಟೈಗರ್ ಐಕೆಎಫ್ ನಮ್ಮ ಕರ್ನಾಟಕ ಫುಟ್‌ಬಾಲ್ ಟ್ರಯಲ್ಸ್’ ಆಯೋಜಿಸಲಾಗುತ್ತಿದೆ ಎಂದು ಕ್ಲಬ್‌ನ ಉಪಾಧ್ಯಕ್ಷ ಲಿಯೋ ಲೇವಿಸ್ ತಿಳಿಸಿದರು.

Banner Ad

ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಟ್ರಯಲ್ಸ್ ಮೂಲಕ ಕಾರವಾರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯುವ ಫುಟ್‌ಬಾಲ್ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ದೊರೆಯಲಿದೆ ಎಂದರು.

ಬೋಲ್ಡ್ ಅಂಡ್ ಡೈನಾಮಿಕ್ ಸ್ಪೋರ್ಟ್ಸ್ ಕ್ಲಬ್ ನಿರಂತರವಾಗಿ ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದು, ಫುಟ್‌ಬಾಲ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಉತ್ತಮ ಆಟಗಾರರನ್ನು ಗುರುತಿಸಿ ತರಬೇತಿ ನೀಡುವ ಮೂಲಕ ಅವರನ್ನು ಇಂಡಿಯನ್ ಲೀಗ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ. ಸ್ಥಳೀಯ ಆಟಗಾರರಿಗೆ ಸೂಕ್ತ ಕ್ರೀಡಾಂಗಣ, ಕ್ರೀಡಾ ಕಿಟ್ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸುವ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.

ಇಂಡಿಯಾ ಖೇಲೋ ಫುಟ್‌ಬಾಲ್‌ನ ಸ್ಕೌಟಿಂಗ್ ಮತ್ತು ಆಪರೇಷನ್ಸ್ ಎಕ್ಸಿಕ್ಯೂಟಿವ್ ಯಧುಕೃಷ್ಣನ್ ವಿ. ಮಾತನಾಡಿ, ಸ್ಥಳೀಯ ಫುಟ್‌ಬಾಲ್ ಪ್ರತಿಭೆಗಳಿಗೆ ವೃತ್ತಿಪರ ಅವಕಾಶ ಕಲ್ಪಿಸುವ ಉದ್ದೇಶದಿಂದ ಇಂಡಿಯಾ ಖೇಲೋ ಫುಟ್‌ಬಾಲ್ ಹಾಗೂ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಜಂಟಿಯಾಗಿ ರಾಜ್ಯದ 12 ಜಿಲ್ಲೆಗಳಲ್ಲಿ ಸ್ಕೌಟಿಂಗ್ ಮತ್ತು ಟ್ರಯಲ್ಸ್ ನಡೆಸುತ್ತಿದೆ ಎಂದರು.

ಇದು ಕೇವಲ ಆಯ್ಕೆ ಪ್ರಕ್ರಿಯೆಯಾಗಿರದೆ, ಯುವ ಆಟಗಾರರಿಗೆ ವೃತ್ತಿಪರ ಫುಟ್‌ಬಾಲ್‌ಗೆ ಪ್ರವೇಶಿಸಲು ದೊರೆಯುವ ಮಹತ್ವದ ಅವಕಾಶವಾಗಿದೆ. ಈಗಾಗಲೇ ದಾವಣಗೆರೆಯಲ್ಲಿ ಆಗಸ್ಟ್‌ನಲ್ಲಿ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಕಾರವಾರ ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದರು.

ಬೆಂಗಳೂರು ಎಫ್‌ಸಿ, ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು, ರೆಬೆಲ್ಸ್ ಎಫ್‌ಸಿ, ರಷ್ ಅಕಾಡೆಮಿ, ಕೆಂಪ್ಸ್ ಎಫ್‌ಸಿ ಹಾಗೂ ದಿ ಸ್ಪೋರ್ಟ್ಸ್ ಸ್ಕೂಲ್ ಸೇರಿದಂತೆ ವಿವಿಧ ಪ್ರತಿಷ್ಠಿತ ಕ್ಲಬ್‌ಗಳು ಮತ್ತು ಅಕಾಡೆಮಿಗಳು ಕಾರ್ಯಕ್ರಮದೊಂದಿಗೆ ಕೈಜೋಡಿಸಿವೆ. ಬೆಂಗಳೂರಿಗೆ ಸೀಮಿತವಾಗಿದ್ದ ಫುಟ್‌ಬಾಲ್ ಸ್ಕೌಟಿಂಗ್ ಪ್ರಕ್ರಿಯೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಿ, ಗ್ರಾಮೀಣ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಉನ್ನತ ಮಟ್ಟಕ್ಕೆ ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಸೆ. 6ರಂದು ಟ್ರಯಲ್ಸ್: ಕಾರವಾರದ ಮಾಲಾದೇವಿ ಮೈದಾನದಲ್ಲಿ ಸೆಪ್ಟೆಂಬರ್ 6ರಂದು ಟ್ರಯಲ್ಸ್ ನಡೆಯಲಿದೆ. ಕಾರವಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ 2009ರಿಂದ 2016ರ ನಡುವೆ ಜನಿಸಿದ ಬಾಲಕರು ಮತ್ತು ಬಾಲಕಿಯರು ಭಾಗವಹಿಸಿ ತಮ್ಮ ಫುಟ್‌ಬಾಲ್ ಕೌಶಲ್ಯ ಪ್ರದರ್ಶಿಸಲು ಅವಕಾಶವಿದೆ.

ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಪಿ.ವಿ. ಪ್ರಜಿತ್, ಉಪಾಧ್ಯಕ್ಷ ಆಂಟನಿ ಡಿ’ಕೋಸ್ಟಾ, ಸಂಯೋಜಕ ಸ್ಯಾಮ್ಸನ್ ಜಾನ್ ಡಿ’ಸೋಜಾ, ಕಾರ್ಯದರ್ಶಿ ಅಕ್ವಿಲ್ ಫರ್ನಾಂಡಿಸ್, ಜಂಟಿ ಕಾರ್ಯದರ್ಶಿ ಕ್ರಿಸ್ಟೋಫರ್ ಡಿ’ಸಿಲ್ವಾ, ಖಜಾಂಚಿ ಅಲ್ಫಾನ್ಸೊ ಫರ್ನಾಂಡಿಸ್ ಹಾಗೂ ನೋಯೆಲ್ ಕೊಯೆಲ್ಹೋ ಉಪಸ್ಥಿತರಿದ್ದರು.

 

Please Share: