ಕರಾವಳಿ ವಾಯ್ಸ್ ನ್ಯೂಸ್
ದಮನ್, ಆ.19: ಅರೇಬಿಯನ್ ಸಮುದ್ರದಲ್ಲಿ ಮುಳುಗುತ್ತಿದ್ದ ಭಾರತೀಯ ಮೀನುಗಾರಿಕಾ ದೋಣಿಯಲ್ಲಿದ್ದ ಒಂಬತ್ತು ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ಕಾವಲು ಪಡೆ (ICG) ಚೇತಕ್ ಹೆಲಿಕಾಪ್ಟರ್ ಬಳಸಿ ಸುರಕ್ಷಿತವಾಗಿ ರಕ್ಷಿಸಿದೆ.
ಒಂಬತ್ತು ಮೀನುಗಾರರು ಪ್ರಯಾಣಿಸುತ್ತಿದ್ದ ದೋಣಿ ಸಮುದ್ರದ ಮಧ್ಯದಲ್ಲಿ ಮುಳುಗುತ್ತಿದ್ದು, ಮೀನುಗಾರರ ಜೀವಕ್ಕೆ ಅಪಾಯವಿದೆ ಎಂಬ ತುರ್ತು ಸಂದೇಶ ದಮನ್ನ ಭಾರತೀಯ ಕರಾವಳಿ ಕಾವಲು ಪಡೆಯ ವಾಯುನೆಲೆ (ICGAS) ಕೇಂದ್ರಕ್ಕೆ ಬಂದಿತ್ತು.
ಮಾಹಿತಿ ಲಭ್ಯವಾದ ತಕ್ಷಣ ಕಾರ್ಯಪ್ರವೃತ್ತರಾದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಚೇತಕ್ ಹೆಲಿಕಾಪ್ಟರ್ ಮೂಲಕ ಘಟನಾ ಸ್ಥಳಕ್ಕೆ ತೆರಳಿ, ಮುಳುಗುತ್ತಿದ್ದ ದೋಣಿಯಲ್ಲಿದ್ದ ಎಲ್ಲಾ ಒಂಬತ್ತು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ದಮನ್ ವಾಯುನೆಲೆಗೆ ಕರೆತಂದರು.
ರಕ್ಷಣಾ ಕಾರ್ಯಾಚರಣೆ ವೇಳೆ ಮೂವರು ಮೀನುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದಮನ್ ಐಸಿಜಿಎಎಸ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರಾವಳಿ ಕಾವಲು ಪಡೆಯ ತ್ವರಿತ ಹಾಗೂ ಸಂಘಟಿತ ರಕ್ಷಣಾ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಸಮುದ್ರದಲ್ಲಿ ಮೀನುಗಾರರು ಹಾಗೂ ನಾವಿಕರ ಸುರಕ್ಷತೆ ಮತ್ತು ಜೀವ ರಕ್ಷಣೆಗೆ ಕರಾವಳಿ ಕಾವಲು ಪಡೆ ಬದ್ಧವಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
