ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಕಳ್ಳತನ ಪ್ರಕರಣಗಳಲ್ಲಿ ಕಳೆದ 46 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಪರ್ಕಳ ಪೋಸ್ಟ್‌ ವ್ಯಾಪ್ತಿಯ ಹೇರ್ಗ ನಿವಾಸಿ ಮಹಮ್ಮದ್ ಯೂಸುಫ್ ತಂದೆ ಅಬ್ದುಲ್ ರೆಹಮಾನ್ ಖಾಜಾ (68) ಬಂಧಿತ ಆರೋಪಿ. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1980ರಲ್ಲಿ ದಾಖಲಾಗಿದ್ದ ಮೂರು ಕಳ್ಳತನ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದನು.

1980ರಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 454, 457 ಹಾಗೂ 380ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 46 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಆರೋಪಿಯ ಪತ್ತೆಗಾಗಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ವಿಶೇಷ ತಂಡ ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಆಗಸ್ಟ್ 14ರಂದು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಯಿತು. ಬಳಿಕ ಕಾನೂನುಬದ್ಧವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ಕೈಗೊಂಡಿದ್ದರು. 46 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Please Share: