ಕರಾವಳಿ ವಾಯ್ಸ್ ನ್ಯೂಸ್ 

ಶಿವಮೊಗ್ಗ: ಕಡಜದ ಹುಳುಗಳು ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಅಸ್ವಸ್ಥಗೊಂಡಿದ್ದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಸಾಗರ ತಾಲೂಕಿನ ಹೆಗ್ಗೋಡು ಬಳಿಯ ಅತ್ತಿಸರ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಅತ್ತಿಸರ ಗ್ರಾಮದ ನಿಶ್ಚಿತ್ (8) ಎಂದು ಗುರುತಿಸಲಾಗಿದೆ. ನಿಶ್ಚಿತ್ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ಮನೆಯ ಹಿಂಭಾಗದಲ್ಲಿದ್ದ ಬಾಳೆಗಿಡದಲ್ಲಿ ಕಡಜದ ಹುಳುವಿನ ಗೂಡು ಇತ್ತು ಎನ್ನಲಾಗಿದ್ದು, ಗೂಡಿನಲ್ಲಿದ್ದ ಹುಳುಗಳು ಬಾಲಕ ನಿಶ್ಚಿತ್ ಹಾಗೂ ಆತನ ತಂದೆ ವೆಂಕಟೇಶ್ ಅವರ ಮೇಲೆ ದಾಳಿ ಮಾಡಿವೆ. ಕಡಜದ ಹುಳುಗಳ ದಾಳಿಯಿಂದ ಇಬ್ಬರೂ ಅಸ್ವಸ್ಥಗೊಂಡಿದ್ದು, ಕುಟುಂಬಸ್ಥರು ತಕ್ಷಣ ಅವರನ್ನು ಹೆಗ್ಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಂದೆ-ಮಗನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ನಿಶ್ಚಿತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಂದೆ ವೆಂಕಟೇಶ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಘಟನೆ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

ಮೃತ ಬಾಲಕ ನಿಶ್ಚಿತ್

 

 

Please Share: