ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ: ತಾಲೂಕಿನ ಕಾನಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೋಡು ಗ್ರಾಮದ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾದ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಗೆದಿದ್ದ ಗುಂಡಿಯಲ್ಲಿ ಗರ್ಭಿಣಿ ಕುರಿಯನ್ನು ಜೀವಂತವಾಗಿ ಹೂತು ಹಾಕಿರುವುದು ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ತನಿಖೆ ನಡೆಸದೆ ಪ್ರಕರಣವನ್ನು ಮುಗಿಸಿ ತೆರಳಿದ್ದಾರೆ ಎಂದು ಗ್ರಾಮಸ್ಥರು ಹಾಗೂ ರೈತರು ಆರೋಪಿಸಿದ್ದಾರೆ.

Banner Ad

ಗ್ರಾಮದ ಅರಣ್ಯ ಪ್ರದೇಶದ ಸರ್ವೇ ನಂ. 60 ಹಾಗೂ 60ಎ ವ್ಯಾಪ್ತಿಯಲ್ಲಿ ಬಿದಿರಿನಿಂದ ತಯಾರಿಸಿದ ವಸ್ತು, ಭತ್ತ, ಅಡಿಕೆ, ಕಡಲೆ, ಕುಂಕುಮ, ನಿಂಬೆಹಣ್ಣು ಸೇರಿದಂತೆ ವಿವಿಧ ಸಾಮಗ್ರಿಗಳು ಪತ್ತೆಯಾಗಿದ್ದವು. ಸುಮಾರು 5×6 ಅಡಿ ಪ್ರದೇಶವನ್ನು ಅಗೆದಿರುವುದು ಹಾಗೂ ಎರಡು ಟವಲ್‌ಗಳು ಸ್ಥಳದಲ್ಲಿ ಕಂಡುಬಂದಿದ್ದವು. ಇದರಿಂದ ಅರಣ್ಯ ಪ್ರದೇಶದಲ್ಲಿ ವಾಮಾಚಾರ ನಡೆದಿರುವ ಶಂಕೆ ಸ್ಥಳೀಯರಲ್ಲಿ ಮೂಡಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಗುಂಡಿಯನ್ನು ತೆರೆಯಲು ಮುಂದಾದಾಗ, ಅಕ್ಕಪಕ್ಕದ ಜಮೀನಿನ ರೈತರೊಂದಿಗೆ ದಬ್ಬಾಳಿಕೆಯ ರೀತಿಯಲ್ಲಿ ವರ್ತಿಸಿ, ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗುಂಡಿ ತೆರೆದಾಗ ಕುರಿಯೊಂದು ಜೀವಂತವಾಗಿ ಹೂತು ಹಾಕಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಕುರಿಯನ್ನು ಹೊರತೆಗೆದ ಬಳಿಕ ಅದನ್ನು ಮತ್ತೆ ಅದೇ ಗುಂಡಿಯಲ್ಲಿ ಹೂತು ಹಾಕಿ, ಯಾವುದೇ ಕ್ರಮ ಕೈಗೊಳ್ಳದೆ ಪೊಲೀಸರು ಸ್ಥಳದಿಂದ ತೆರಳಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಘಟನೆಯ ವೇಳೆ ಸ್ಥಳದಲ್ಲಿದ್ದವರಿಗೆ ಫೋಟೊ ಅಥವಾ ವಿಡಿಯೋ ಮಾಡಲೂ ಪೊಲೀಸರು ಅವಕಾಶ ನೀಡಲಿಲ್ಲ ಎಂದು ರೈತರು ಆರೋಪಿಸಿದ್ದಾರೆ. ವಾಮಾಚಾರ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾದ ಸಂದರ್ಭದಲ್ಲಿ, ಈ ರೀತಿಯ ನಡೆ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಘಟನೆಯ ಹಿಂದೆ ಯಾರ ಕೈವಾಡವಿದೆ, ಕುರಿಯನ್ನು ಜೀವಂತವಾಗಿ ಗುಂಡಿಯಲ್ಲಿ ಹೂತು ಹಾಕಿರುವುದರ ಉದ್ದೇಶವೇನು ಹಾಗೂ ಸ್ಥಳದಲ್ಲಿ ಪತ್ತೆಯಾದ ಇತರ ವಸ್ತುಗಳಿಗೂ ಇದಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪೊಲೀಸರು ಹಾಗೂ ಶಂಕಿತ ವ್ಯಕ್ತಿಗಳ ನಡುವೆ ಒಳ ಒಪ್ಪಂದವಿದೆಯೇ ಎಂಬ ಅನುಮಾನವೂ ಗ್ರಾಮಸ್ಥರಲ್ಲಿ ಮೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಅಲ್ಲಿಯೇ ಮುಕ್ತಾಯಗೊಳಿಸಿ ತೆರಳಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

Please Share: