ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ: ತಾಲೂಕಿನ ಕಾನಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೋಡು ಗ್ರಾಮದ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದ್ದು, ವಾಮಾಚಾರ ನಡೆದಿರುವ ಶಂಕೆ ಸ್ಥಳೀಯರಲ್ಲಿ ಮೂಡಿದೆ.

ಗ್ರಾಮದ ಅರಣ್ಯ ಪ್ರದೇಶದ ಸರ್ವೇ ನಂ. 60 ಹಾಗೂ 60ಎ ವ್ಯಾಪ್ತಿಯಲ್ಲಿ ಬಿದಿರಿನಿಂದ ತಯಾರಿಸಿದ ವಸ್ತು, ಭತ್ತ, ಅಡಿಕೆ, ಕಡಲೆ, ಕುಂಕುಮ, ನಿಂಬೆಹಣ್ಣು ಸೇರಿದಂತೆ ವಿವಿಧ ಸಾಮಗ್ರಿಗಳು ಕಂಡುಬಂದಿವೆ. ಅಲ್ಲದೆ, ಸುಮಾರು 5×6 ಅಡಿ ಪ್ರದೇಶವನ್ನು ಅಗೆದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಎರಡು ಟವಲ್‌ಗಳೂ ಪತ್ತೆಯಾಗಿವೆ ಎನ್ನಲಾಗಿದೆ.

ಸ್ಥಳದಲ್ಲಿ ಕಂಡುಬಂದಿರುವ ಕುರುಹುಗಳು ಅಂತ್ಯಸಂಸ್ಕಾರ ನಡೆಸಿದ ರೀತಿಯಲ್ಲಿಯೂ ಕಾಣಿಸಿಕೊಂಡಿದ್ದು, ಅಗೆದ ಜಾಗದಲ್ಲಿ ಹೆಣವಿರಬಹುದೇ ಎಂಬ ಶಂಕೆಯನ್ನೂ ಕೆಲ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದರಿಂದ ಘಟನೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ವಿಷಯ ತಿಳಿದು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾಗಿರುವ ವಸ್ತುಗಳು ಹಾಗೂ ಅಗೆದಿರುವ ಜಾಗದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ನಿಜವಾಗಿ ಏನಾಗಿತ್ತು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

ವಾಮಾಚಾರ ನಡೆದಿರುವುದು ಅಥವಾ ಅಗೆದ ಜಾಗದಲ್ಲಿ ಯಾವುದೇ ಶವವಿರುವುದು ಇನ್ನೂ ದೃಢಪಟ್ಟಿಲ್ಲ. ಸ್ಥಳದಲ್ಲಿ ಪತ್ತೆಯಾದ ವಸ್ತುಗಳ ಆಧಾರದ ಮೇಲೆ ಸ್ಥಳೀಯರಲ್ಲಿ ಮೂಡಿರುವ ಅನುಮಾನವಾಗಿದ್ದು, ಅಧಿಕಾರಿಗಳ ತನಿಖೆಯ ಬಳಿಕವೇ ಘಟನೆಯ ನಿಖರ ಸ್ವರೂಪ ಸ್ಪಷ್ಟವಾಗಲಿದೆ.

 

Please Share: