ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ತಾಲೂಕಿನ ಮಾಳ್ಕೋಡ–ಕೆಳಗಿನ ಇಡಗುಂಜಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೂರದ ಪ್ರದೇಶಗಳಿಂದ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಪಾಲಕರ ಒಗ್ಗಟ್ಟಿನ ಪ್ರಯತ್ನಕ್ಕೆ ಶಾಲೆಯ ಎಸ್‌ಡಿಎಂಸಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಕೈಜೋಡಿಸಿದ್ದು, ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

ಶತಮಾನೋತ್ಸವ ಸಂಭ್ರಮದಲ್ಲಿರುವ ಈ ಶಾಲೆಯು ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಬಾಳುಬೆಲೆ, ಕೆಳಗಿನ ಇಡಗುಂಜಿ ಹಾಗೂ ಮಾಳ್ಕೋಡ ಭಾಗಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂಚಾರದ ತೊಂದರೆ ಎದುರಾಗುತ್ತಿತ್ತು. ಇದನ್ನು ಮನಗಂಡ ಪಾಲಕರು ಒಗ್ಗೂಡಿ ವಾಹನ ವ್ಯವಸ್ಥೆ ಕಲ್ಪಿಸಿದ್ದು, ಎಸ್‌ಡಿಎಂಸಿ ಮತ್ತು ಹಳೆ ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ.

ವಾಹನಕ್ಕೆ ಪೂಜೆ ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಹೊಸ ವಾಹನದಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಈ ವ್ಯವಸ್ಥೆಯಿಂದ ದೂರದ ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ಹೋಗುವುದನ್ನು ತಡೆಯುವ ಜೊತೆಗೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯಾ ನಾಯ್ಕ, ನಿಕಟಪೂರ್ವ ಉಪಾಧ್ಯಕ್ಷ ಗೋಪಾಲ ಜಟ್ಟಿ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ ಎಂ. ಶೆಟ್ಟಿ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಾಗರಾಜ ನಾಯ್ಕ, ಉಪಾಧ್ಯಕ್ಷರಾದ ಶಂಕರ ಗಣಪತಿ ನಾಯ್ಕ ಹಾಗೂ ಜಿ.ಕೆ. ಹೆಗಡೆ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಶಾಂತ ಎಚ್. ನಾಯ್ಕ, ಎಸ್‌ಡಿಎಂಸಿ ಉಪಾಧ್ಯಕ್ಷೆ ಭಾರತಿ ನಾಗರಾಜ ನಾಯ್ಕ, ಮುಖ್ಯ ಶಿಕ್ಷಕಿ ಲಕ್ಷ್ಮೀ ಎನ್. ಭಟ್ಟ, ಎಸ್‌ಡಿಎಂಸಿ ಹಾಗೂ ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ
“ಶತಮಾನೋತ್ಸವ ಸಂಭ್ರಮದಲ್ಲಿರುವ ನಮ್ಮ ಶಾಲೆಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸುವ ಗುರಿ ಹೊಂದಿದ್ದೇವೆ. ದೂರದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪಾಲಕರು ವಾಹನ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ. ಇದರ ನಿರ್ವಹಣೆಗೆ ಅಗತ್ಯ ಆರ್ಥಿಕ ನೆರವನ್ನು ದಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಒದಗಿಸಲಾಗುವುದು,”
– ನಾಗರಾಜ ನಾಯ್ಕ, ಶತಮಾನೋತ್ಸವ ಸಮಿತಿ ಅಧ್ಯಕ್ಷ
ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣಕ್ಕೂ ಒತ್ತು
“ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್ ತರಬೇತಿಯನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ದೂರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಾಲಕರು ಆರಂಭಿಸಿರುವ ವಾಹನ ವ್ಯವಸ್ಥೆಗೆ ಎಸ್‌ಡಿಎಂಸಿ ಸಂಪೂರ್ಣ ಬೆಂಬಲ ನೀಡಲಿದೆ. ವಿದ್ಯಾರ್ಥಿಗಳು ಈ ಸೌಲಭ್ಯದ ಪ್ರಯೋಜನ ಪಡೆಯಬೇಕು,”
ರಾಜೇಶ ಎಂ. ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ
