ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಶಿರವಾಡ ಗ್ರಾಮದ ಬಂಗಾರಪ್ಪ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ವಿದ್ಯುತ್ ಅವಘಡದಿಂದ ಹಲವು ಮನೆಗಳಲ್ಲಿದ್ದ ವಿದ್ಯುತ್ ಉಪಕರಣಗಳು ಸುಟ್ಟು ಹಾನಿಗೊಳಗಾದ ಘಟನೆ ನಡೆದಿದೆ.
ಹಠಾತ್ ವಿದ್ಯುತ್ ವೋಲ್ಟೇಜ್ನಲ್ಲಿ ಉಂಟಾದ ಏರಿಳಿತದಿಂದ ಮನೆಗಳಲ್ಲಿದ್ದ ಟಿವಿ, ಫ್ರಿಜ್, ಫ್ಯಾನ್, ಮಿಕ್ಸರ್, ಮೊಬೈಲ್ ಚಾರ್ಜರ್ ಸೇರಿದಂತೆ ವಿವಿಧ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಏಕಾಏಕಿ ವೋಲ್ಟೇಜ್ ಹೆಚ್ಚಾದ ಪರಿಣಾಮ ಮನೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ಬಗ್ಗೆ ಸ್ಥಳೀಯರು ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವಘಡಕ್ಕೆ ಕಾರಣವಾದ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
