ಕರಾವಳಿ ವಾಯ್ಸ್ ನ್ಯೂಸ್
ಕಾರವಾರ, ಜು.1: ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಆರು ತಿಂಗಳ ಅವಧಿಗೆ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಗಾಂಧಿನಗರದ ಮಂಜು ತಂದೆ ಅರ್ಜುನ ನವಲೆ (30) ಹಾಗೂ ಬಸಾಪುರದ ಮಧುಸಿಂಗ್ ತಂದೆ ಗಂಗಾರಾಮಸಿಂಗ್ ರಜಪೂತ (31) ಗಡಿಪಾರುಗೊಂಡವರು. ಇಬ್ಬರ ವಿರುದ್ಧವೂ ದರೋಡೆ, ಅಕ್ರಮ ಬಡ್ಡಿ ವ್ಯವಹಾರ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಕೆಲವು ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದರ ಜೊತೆಗೆ ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.
ಅಪರಾಧ ಹಿನ್ನೆಲೆಯನ್ನು ಬಂಡವಾಳವಾಗಿಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ, ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಹಾಗೂ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಮುಂಡಗೋಡ ಪೊಲೀಸ್ ಠಾಣೆ ವತಿಯಿಂದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಪ್ರಸ್ತಾವನೆಯ ವಿಚಾರಣೆ ನಡೆಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55(ಎ) ಹಾಗೂ 55(ಬಿ) ಅಡಿಯಲ್ಲಿ ಜೂನ್ 27ರಿಂದ ಡಿಸೆಂಬರ್ 26, 2026ರವರೆಗೆ ಮಂಜು ಅರ್ಜುನ ನವಲೆ ಅವರನ್ನು ಕೆಜಿಎಫ್ ಜಿಲ್ಲೆಯ ರಾಬರ್ಟ್ಸನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಹಾಗೂ ಮಧುಸಿಂಗ್ ಗಂಗಾರಾಮಸಿಂಗ್ ರಜಪೂತ ಅವರನ್ನು ಮಂಡ್ಯ ಜಿಲ್ಲೆಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ.
ಆದೇಶದಂತೆ ಮುಂಡಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಇಬ್ಬರನ್ನೂ ಆಯಾ ಜಿಲ್ಲೆಗಳ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಕರೆದೊಯ್ದು ಸಂಬಂಧಿತ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿರುವುದಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
