ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯಲ್ಲಿ ಅಕ್ರಮವಾಗಿ ಸ್ಪೋಟಕ ವಸ್ತುಗಳು (ನಾಡಬಾಂಬ್‌ಗಳು) ಸಂಗ್ರಹಿಸಿಟ್ಟಿದ್ದರಿಂದ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 22ರಂದು ಬೆಳಿಗ್ಗೆ ಸುಮಾರು 5.10ರ ವೇಳೆಗೆ ವಸಂತ @ ವಾಸು ರಾಯಪ್ಪ ಕೊರವರ ಎಂಬುವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್‌ಗಳು ಏಕಾಏಕಿ ಸ್ಫೋಟಗೊಂಡಿದ್ದವು. ಸ್ಫೋಟದ ತೀವ್ರತೆಗೆ ಆರೋಪಿಯ ಮನೆಯ ಗೋಡೆ, ಮೇಲ್ಛಾವಣಿಯ ಹಂಚುಗಳು ಹಾಗೂ ಅಡುಗೆಮನೆಯ ಕಿಟಕಿಯ ಗಾಜುಗಳು ಜಖಂಗೊಂಡಿದ್ದಲ್ಲದೆ, ಸುತ್ತಮುತ್ತಲಿನ ಮನೆಗಳ ಹಂಚು, ಬಾಗಿಲುಗಳಿಗೂ ಹಾನಿಯಾಗಿತ್ತು. ಘಟನೆಯಲ್ಲಿ ಸುಮಾರು ₹1.15 ಲಕ್ಷ ಮೌಲ್ಯದ ಆಸ್ತಿ ನಷ್ಟ ಸಂಭವಿಸಿತ್ತು.
ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಿ ತಾಂತ್ರಿಕ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಲಾಗಿತ್ತು.
ತನಿಖೆಯ ವೇಳೆ ಆರೋಪಿ ಜೂ. 24ರಂದು ಹುಬ್ಬಳ್ಳಿಯ ತಾರಿಹಾಳ ಗ್ರಾಮದ ಬಸ್ ನಿಲ್ದಾಣದ ಸಮೀಪ ಪತ್ತೆಯಾಗಿದ್ದು, ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
