ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ, ಜೂನ್ 20: ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ನಾಗರ ಹಾವು ಕಚ್ಚಿದ ಪರಿಣಾಮ ಲೈನ್‌ಮೆನ್ ಒಬ್ಬರು ಮೃತಪಟ್ಟ ಘಟನೆ ಶನಿವಾರ ಅಂಕೋಲಾದಲ್ಲಿ ನಡೆದಿದೆ.

ಮೃತರನ್ನು ಅಂಕೋಲಾ ತಾಲೂಕಿನ ಮೊಗಟಾ ಗ್ರಾಮದ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಮೀಪ ನಿವಾಸಿಯಾಗಿದ್ದ ಸುರೇಶ ಗೋವಿಂದರಾಯ ನಾಯಕ (48) ಎಂದು ಗುರುತಿಸಲಾಗಿದೆ. ಅವರು ಕಾರವಾರ ತಾಲೂಕಿನ ಕಿನ್ನರದಲ್ಲಿ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪ್ರತಿದಿನದಂತೆ ರೈಲಿನಲ್ಲಿ ಕೆಲಸಕ್ಕೆ ತೆರಳಲು ಶನಿವಾರ ಬೆಳಿಗ್ಗೆ ಅಂಕೋಲಾ ರೈಲು ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೋಗದ್ದೆ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆ ಕುಳಿತಿದ್ದರು. ಈ ಸಂದರ್ಭದಲ್ಲಿ ನಾಗರ ಹಾವು ಅವರ ಕೈ ಬೆರಳಿಗೆ ಕಚ್ಚಿದೆ ಎನ್ನಲಾಗಿದೆ.

ಹಾವು ಕಚ್ಚಿದ ಪರಿಣಾಮ ಅಸ್ವಸ್ಥಗೊಂಡು ಸ್ಥಳದಲ್ಲೇ ನರಳಾಡುತ್ತಿದ್ದ ಅವರನ್ನು ಸಾರ್ವಜನಿಕರು ತಕ್ಷಣ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದರು. ಬೆಳಿಗ್ಗೆ 10.45ರ ಸುಮಾರಿಗೆ ಆಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಮೃತರ ಚಿಕ್ಕಪ್ಪನ ಮಗ ಎಂ.ಜಿ. ಗೋಕುಲ ಗೌರೀಶ ನಾಯಕ ಅವರು ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Please Share: