ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಅನಾರೋಗ್ಯದ ಹಿನ್ನೆಲೆಯಲ್ಲಿ ರಕ್ತ ಪರೀಕ್ಷೆಗಾಗಿ ಮಗನೊಂದಿಗೆ ಬೈಕಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ಆಟೋ ರಿಕ್ಷಾ ಡಿಕ್ಕಿಗೆ ತುತ್ತಾಗಿ ಮೃತಪಟ್ಟ ಘಟನೆ ಪಟ್ಟಣದ ಅಂಬಾರಕೊಡ್ಲ ತಿರುವಿನಲ್ಲಿ ನಡೆದಿದೆ.
ತಾಲೂಕಿನ ಶಿರಕುಳಿ ಗ್ರಾಮದ ಲಲಿತಾ ನಾಯ್ಕ (74) ಮೃತರು. ಶನಿವಾರ ಬೆಳಿಗ್ಗೆ ಸುಮಾರು 7.30 ಗಂಟೆಗೆ ತಮ್ಮ ಪುತ್ರ ರವಿ ನಾಯ್ಕ ಅವರೊಂದಿಗೆ ಬೈಕಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಂಬಾರಕೊಡ್ಲ ತಿರುವಿನ ಬಳಿ ವೇಗವಾಗಿ ಬಂದ ಎನ್ನಲಾದ ಕೆಎ 30 ಎ 1056 ನೋಂದಣಿಯ ಆಟೋ ರಿಕ್ಷಾ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಲಲಿತಾ ನಾಯ್ಕ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ತಕ್ಷಣ ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಗಾಯಗಳ ತೀವ್ರತೆ ಹೆಚ್ಚಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
